
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್
ನವದೆಹಲಿ: ಚುನಾವಣಾ ಕಣವಾಗಿರುವ ಗುಜರಾತ್ ನಲ್ಲಿ 750 ಕೋಟಿ ರೂಪಾಯಿ ಮೌಲ್ಯದ ನಗದು, ಡ್ರಗ್ಸ್ ನ್ನು ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ಎಎನ್ಐ ಗೆ ಸಂದರ್ಶನ ನೀಡಿರುವ ರಾಜೀವ್ ಕುಮಾರ್, ಈ ವರೆಗೂ ನಗದು, ಚಿನ್ನಾಭರಣ, ಡ್ರಗ್ಸ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
ಗುರುವಾರ ಗುಜರಾತ್ ನ 89 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. 2017 ರ ಚುನಾವಣೆಯಲ್ಲಿ ಒಟ್ಟು 27 ಕೋಟಿ ರೂಪಾಯಿ ಮೌಲ್ಯದ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿತ್ತು. ಈಗ ನೀತಿ ಸಂಹಿತೆ ಜಾರಿಯಾದಾಗಿನಿಂದ 750 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ.
27 ಕೋಟಿ ರೂಪಾಯಿ ಮೌಲ್ಯದ ನಗದು, 15 ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಗುಜರಾತ್ ನಲ್ಲಿ ಮದ್ಯ ಸಂಪೂರ್ಣ ನಿಷೇಧವಾಗಿದೆ ಎಂಬುದು ಗಮನಾರ್ಹ ಸಂಗತಿ.
ಇದನ್ನೂ ಓದಿ: ವಡೋದರಾ ಬಳಿ ಕಾರ್ಖಾನೆ ಮೇಲೆ ಗುಜರಾತ್ ಎಟಿಎಸ್ ದಾಳಿ; 500 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ
ಇನ್ನು ವಶಕ್ಕೆ ಪಡೆಯಲಾಗಿರುವ ಡ್ರಗ್ಸ್ ಮೌಲ್ಯ 60 ಕೋಟಿಯದ್ದಾಗಿದೆ. ಬುಧವಾರದಂದೂ ವಡೋದರಾದಲ್ಲಿ ಬೃಹತ್ ಪ್ರಮಾಣದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಸುಮಾರು 450 ಕೋಟಿ ರೂಪಾಯಿ ಮೌಲ್ಯ ಹೊಂದಿದೆ ಎಂದು ಅಂದಾಜಿಸಲಾಗಿದೆ.
ಉಚಿತವಾಗಿ ನೀಡಲು ತಂದಿದ್ದ ವಸ್ತುಗಳ ಮೌಲ್ಯ ಸುಮಾರು 171 ಕೋಟಿ ರೂಪಾಯಿ ಆಗಿದ್ದು, ಡಿಆರ್ ಐ, ಆದಾಯ ತೆರಿಗೆ, ಎಟಿಎಸ್ ಗುಜರಾತ್, ಗುಜರಾತ್ ಪೊಲೀಸರು ಕಟ್ಟುನಿಟ್ಟಾಗಿ ಕಾರ್ಯಾಚರಣೆ ಮಾಡಿವೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.