ಗುಜರಾತ್ ವಿಧಾನಸಭಾ ಚುನಾವಣೆ: ನಾಳೆ 2ನೇ ಹಂತದ ಮತದಾನ, ಸಕಲ ಸಿದ್ಧತೆ

ಗುಜರಾತ್ ವಿಧಾನಸಭೆಯ 93 ಸ್ಥಾನಗಳಿಗೆ ನಾಳೆ ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಮುಕ್ತ ಹಾಗೂ ಸುಗಮ ಮತದಾನಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಹಮದಾಬಾದ್: ಗುಜರಾತ್ ವಿಧಾನಸಭೆಯ 93 ಸ್ಥಾನಗಳಿಗೆ ನಾಳೆ ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಮುಕ್ತ ಹಾಗೂ ಸುಗಮ ಮತದಾನಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಅಹಮದಾಬಾದ್, ವಡೋದರಾ, ಗಾಂಧಿನಗರ ಮತ್ತಿತರ ಜಿಲ್ಲೆಗಳಲ್ಲಿ ಮತದಾನ ನಡೆಯಲಿದ್ದು, ಬಿಜೆಪಿ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಸೇರಿದಂತೆ 61 ಪಕ್ಷಗಳ 833 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

ಬಿಜೆಪಿ, ಕೇಜ್ರಿವಾಲ್ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು,  ಕಾಂಗ್ರೆಸ್ 90 ಕ್ಷೇತ್ರಗಳಲ್ಲಿ, ಎನ್ ಸಿಪಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಉಳಿದಂತೆ ಬಿಟಿಪಿ 12, ಬಿಎಸ್ ಪಿ 44 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.  ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಹಾರ್ದಿಕ್ ಪಟೇಲ್, ಅಲ್ಫೇಶ್ ಠಾಕೂರ್, ಜಿಗ್ನೇಶ್ ಮೆವಾನಿ ಸೇರಿದಂತೆ ಹಲವು ಮಂದಿ ಚುನಾವಣಾ ಕಣದಲ್ಲಿದ್ದು, ನಾಳೆ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

ಈ ಚುನಾವಣೆಯನ್ನು ಬಿಜೆಪಿ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದು, ಡಿಸೆಂಬರ್ 1 ಮತ್ತು 2 ರಂದು ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಪ್ರಚಾರ ನಡೆಸಿದ್ದು, ತನ್ನ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಿದ್ದಾರೆ. ಎರಡನೇ ಹಂತದ ಚುನಾವಣೆಯಲ್ಲಿ 1.29 ಕೋಟಿ ಪುರುಷರು 1.22 ಕೋಟಿ ಮಹಿಳಾ ಮತದಾರರು ಸೇರಿದಂತೆ ಒಟ್ಟಾರೇ 2.51 ಕೋಟಿ ಮತದಾರರು ತಮ್ಮ ಮತ ಚಲಾಯಿಸಲು ಅರ್ಹರಾಗಿದ್ದಾರೆ.

ಸುಗಮ ಮತದಾನಕ್ಕಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, 14,975 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 1.13 ಲಕ್ಷ ಚುನಾವಣಾ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಆಯೋಗ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com