ಕೆಎಸ್ಆರ್ ಟಿಸಿ ಬಸ್ ಗಳ ಮೇಲೆ 'ಜೈ ಮಹಾರಾಷ್ಟ್ರ' ಎಂದು ಬರೆದ ಶಿವಸೇನಾ ಕಾರ್ಯಕರ್ತರು
ಮಹಾರಾಷ್ಟ್ರ - ಕರ್ನಾಟಕ ಗಡಿ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದು, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣದ ಕಾರ್ಯಕರ್ತರು ಮಂಗಳವಾರ ಪುಣೆ ನಗರದ ಸ್ವರ್ಗೇಟ್ ಪ್ರದೇಶದಲ್ಲಿ ಕನಿಷ್ಠ ಮೂರು ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗಳಿಗೆ...
Published: 06th December 2022 05:53 PM | Last Updated: 06th December 2022 05:53 PM | A+A A-

ಉದ್ಧವ್ ಠಾಕ್ರೆ
ಪುಣೆ: ಮಹಾರಾಷ್ಟ್ರ - ಕರ್ನಾಟಕ ಗಡಿ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದು, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣದ ಕಾರ್ಯಕರ್ತರು ಮಂಗಳವಾರ ಪುಣೆ ನಗರದ ಸ್ವರ್ಗೇಟ್ ಪ್ರದೇಶದಲ್ಲಿ ಕನಿಷ್ಠ ಮೂರು ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗಳಿಗೆ ಕಪ್ಪು ಮಸಿ ಮತ್ತು ಕಿತ್ತಳೆ ಬಣ್ಣ ಬಳಿದಿದ್ದಾರೆ.
ಶಿವಸೇನಾ ಕಾರ್ಯಕರ್ತರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಕನಿಷ್ಠ ಎರಡು-ಮೂರು ಬಸ್‌ಗಳಿಗೆ ಕಪ್ಪು ಬಣ್ಣ ಎರಚಿದ್ದಾರೆ. ಅವರು ಕಿತ್ತಳೆ ಸ್ಪ್ರೇ ಬಳಸಿ ಈ ಬಸ್‌ಗಳ ಮೇಲೆ "ಜೈ ಮಹಾರಾಷ್ಟ್ರ" ಎಂದು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಗಡಿ ವಿವಾದ: ಬೆಳಗಾವಿಯಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶ
ಬಸ್‌ಗಳಿಗೆ ಬಣ್ಣ ಬಳಿದ ನಾಲ್ಕೈದು ಮಂದಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದಕ್ಕು ಮುನ್ನ ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ, ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದರು.
ಮಹಾರಾಷ್ಟ್ರದ ಗಡಿ ಕ್ಯಾತೆ ಈಗ ಬೆಳಗಾವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟು ಮಾಡಿದೆ. ಮಹಾರಾಷ್ಟ್ರ ನಾಯಕರು ನೀಡಿದ್ದ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಮಂಗಳವಾರ ನಡೆಸಲು ಉದ್ದೇಶಿಸಿರುವ ಬೃಹತ್ ಬಹಿರಂಗ ಸಭೆಯನ್ನು ನಿಷೇಧಿಸಲಾಗಿದೆ. ಇದರ ಜೊತೆಗೆ ಕರವೇ ನಾಯಕರ ಬೆಳಗಾವಿ ನಗರ ಪ್ರವೇಶಕ್ಕೂ ತಡೆಯೊಡ್ಡಲಾಗಿದೆ.