ಬೆಳಗಾವಿ: ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದು, ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ, ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುಣೆಯಿಂದ ಬೆಂಗಳೂರಿಗೆ ಹೊರಟಿದ್ದ ಮಹಾರಾಷ್ಟ್ರ ನೋಂದಣಿ ಹೊಂದಿದ್ದ ವಾಹನಗಳ ಮೇಲೆ ಕರವೇ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದು, ಲಾರಿಗಳ ಗಾಜು ಪುಡಿಪುಡಿಯಾಗಿದೆ. ಅಲ್ಲದೆ ಮಹಾರಾಷ್ಟ್ರ ನೋಂದಣಿಯ ಹಲವು ವಾಹನಗಳನ್ನು ತಡೆದು ನಂಬರ್ ಪ್ಲೇಟ್ ಮೇಲೆ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.
ಮಹಾರಾಷ್ಟ್ರದ ಗಡಿ ಕ್ಯಾತೆ ಈಗ ಬೆಳಗಾವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟು ಮಾಡಿದೆ. ಮಹಾರಾಷ್ಟ್ರ ನಾಯಕರು ನೀಡಿದ್ದ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಮಂಗಳವಾರ ನಡೆಸಲು ಉದ್ದೇಶಿಸಿರುವ ಬೃಹತ್ ಬಹಿರಂಗ ಸಭೆಯನ್ನು ನಿಷೇಧಿಸಲಾಗಿದೆ. ಇದರ ಜೊತೆಗೆ ಕರವೇ ನಾಯಕರ ಬೆಳಗಾವಿ ನಗರ ಪ್ರವೇಶಕ್ಕೂ ತಡೆಯೊಡ್ಡಲಾಗಿದೆ.
ಬಹಿರಂಗ ಸಭೆ ನಡೆಸಲು ಕರವೇ ಕಾರ್ಯಕರ್ತರು ಬೆಳಗಾವಿಯತ್ತ ಮುನ್ನುಗುತ್ತಿದ್ದು, ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್‌ಗೇಟ್ ಬಳಿ ಅವರನ್ನು ಪೊಲೀಸರು ತಡೆದರು, ಈ ಹಿನ್ನೆಲೆಯಲ್ಲಿ ಟೋಲ್ ಗೇಟ್ ಬಳಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಹಿರೇಬಾಗೇವಾಡಿ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಕರವೇ ಅಧ್ಯಕ್ಷ ನಾರಾಯಣಗೌಡ ಅವರು, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು, ಅದನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಇದೇ ವೇಳೆ ಕನ್ನಡ ಮುಖಂಡರು ಮತ್ತು ಕಾರ್ಯಕರ್ತರನ್ನು ಬೆಳಗಾವಿಗೆ ಬರದಂತೆ ತಡೆದ ಪೊಲೀಸ್ ಇಲಾಖೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯದಲ್ಲಿ ಪೊಲೀಸರು ಆಡಳಿತ ನಡೆಸುತ್ತಿದ್ದಾರಾ ಎಂದು ಪ್ರಶ್ನಿಸಿದರು. ಕನ್ನಡ ಹೋರಾಟಗಾರರ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ರೀತಿಯನ್ನು ಪ್ರಶ್ನಿಸಿದ ಅವರು, ಕನ್ನಡಿಗರ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದು ಸರಿಯಲ್ಲ ಎಂದರು. `ಬೆಳಗಾವಿ ಪ್ರವೇಶಿಸಲು ಪೊಲೀಸರು ಏಕೆ ಅವಕಾಶ ನೀಡಲಿಲ್ಲ ಎಂಬ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
Advertisement