ಗಡಿ ವಿವಾದ: ಕರವೇ ಅಧ್ಯಕ್ಷರಿಗೆ ಬೆಳಗಾವಿ ಪ್ರವೇಶಕ್ಕೆ ತಡೆ; ಹಿರೇಬಾಗೇವಾಡಿ ಟೋಲ್‌ಗೇಟ್‌ನಲ್ಲಿ ಪರಿಸ್ಥಿತಿ ಉದ್ವಿಗ್ನ
ಬೆಳಗಾವಿ ಸಂಬಂಧ ಮಹಾರಾಷ್ಟ್ರ ನಾಯಕರು ನೀಡಿದ್ದ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಮಂಗಳವಾರ ನಡೆಸಲು ಉದ್ದೇಶಿಸಿರುವ ಬೃಹತ್ ಬಹಿರಂಗ ಸಭೆಯನ್ನು ನಿಷೇಧಿಸಲಾಗಿದೆ. ಇದರ ಜೊತೆಗೆ ಕರವೇ ನಾಯಕರ ಬೆಳಗಾವಿ ನಗರ ಪ್ರವೇಶಕ್ಕೂ ತಡೆಯೊಡ್ಡಲಾಗಿದೆ.
Published: 06th December 2022 12:59 PM | Last Updated: 06th December 2022 02:10 PM | A+A A-

ಬೆಳಗಾವಿಯತ್ತ ಸಾಗುತ್ತಿರುವ ಕರವೇ ಕಾರ್ಯಕರ್ತರು.
ಬೆಳಗಾವಿ: ಬೆಳಗಾವಿ ಸಂಬಂಧ ಮಹಾರಾಷ್ಟ್ರ ನಾಯಕರು ನೀಡಿದ್ದ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಮಂಗಳವಾರ ನಡೆಸಲು ಉದ್ದೇಶಿಸಿರುವ ಬೃಹತ್ ಬಹಿರಂಗ ಸಭೆಯನ್ನು ನಿಷೇಧಿಸಲಾಗಿದೆ. ಇದರ ಜೊತೆಗೆ ಕರವೇ ನಾಯಕರ ಬೆಳಗಾವಿ ನಗರ ಪ್ರವೇಶಕ್ಕೂ ತಡೆಯೊಡ್ಡಲಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್‌ಗೇಟ್ ಬಳಿ ತಡೆಯಲು ಪೊಲೀಸರು ಸಜ್ಜಾಗಿದ್ದು, ಈ ಹಿನ್ನೆಲೆಯಲ್ಲಿ ಟೋಲ್ ಗೇಟ್ ಬಳಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಮಹಾರಾಷ್ಟ್ರದ ಇಬ್ಬರು ಸಚಿವರು ಮಂಗಳವಾರ ಬೆಳಗಾವಿಗೆ ಬರುವ ಕಾರ್ಯಕ್ರಮವಿತ್ತು. ಇಲ್ಲಿ ನಡೆಯಲಿರುವ ಪರಿನಿರ್ವಾಣ ದಿನದಲ್ಲಿ ಭಾಗವಹಿಸಲು ಅವರು ಬರುವವರಿದ್ದರು. ಆದರೆ, ಗಡಿ ವಿವಾದ ಉತ್ತುಂಗದಲ್ಲಿರುವ ಕಾಲದಲ್ಲಿ ಅವರ ಆಗಮನದಿಂದ ಶಾಂತಿ ಸುವ್ಯವಸ್ಥೆಗೆ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ರಾಜ್ಯ ಸರಕಾರವೇ ಅವರನ್ನು ಆಗಮಿಸದಂತೆ ಮನವಿ ಮಾಡಿತ್ತು.
ಒಂದೊಮ್ಮೆ ಇದನ್ನು ಧಿಕ್ಕರಿಸಿ ಅವರು ಬಂದರೂ ಗಡಿಯಲ್ಲೇ ತಡೆಯುವ ನಿಟ್ಟಿನಲ್ಲಿ ಪ್ರತಿಬಂಧಕಾಜ್ಞೆ ವಿಧಿಸಲಾಗಿದೆ. ಜತೆಗೆ ಜಿಲ್ಲೆಯನ್ನು ಮಹಾರಾಷ್ಟ್ರ ಭಾಗದಿಂದ ಪ್ರವೇಶಿರುವ ಎಲ್ಲ ಮಾರ್ಗಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
ಇದನ್ನೂ ಓದಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಕಾನೂನು ಹೋರಾಟದಲ್ಲಿ ಗೆಲ್ಲುವ ವಿಶ್ವಾಸ ನಮಗಿದೆ; ಸಿಎಂ ಬೊಮ್ಮಾಯಿ
ಈ ನಡುವೆ, ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಹಿಂಸಾಚಾರ ಮಾಡಬಹುದು ಎಂಬ ಮಾತುಗಳು ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಬೆಳಗಾವಿಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆಗೊಳಿಸಲಾಗಿದೆ.
ಕರವೇ ಕಾರ್ಯಕರ್ತರು, ರಾಜ್ಯಾಧ್ಯಕ್ಷ ನಾರಾಯಣ ಗೌಡರು ಬೆಳಗಾವಿ ನಗರ ಪ್ರವೇಶಿಸುವುದನ್ನು ತಡೆಯಲು ಹಿರೇಬಾಗೇವಾಡಿ ಟೋಲ್ ಬಳಿ 400ಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್ ಏರ್ಪಡಿಸಲಾಗಿದೆ.
ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಅವರೇ ಸಾರಥ್ಯ ವಹಿಸಿದ್ದಾರೆ. 2 ಡಿಸಿಪಿ, 4 ಜನ ಡಿಸಿಪಿ, 10 ಮಂದಿ ಪಿಐ 11 ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಕಾರ್ಯಕರ್ತರನ್ನು ಇಲ್ಲೇ ವಶಕ್ಕೆ ಪಡೆಯಲು ವ್ಯವಸ್ಥೆಗಳನ್ನು ಮಾಡಲಾಗಿದೆ.
ಇದನ್ನೂ ಓದಿ: ಗಡಿ ವಿವಾದ: ಕನ್ನಡಿಗರ ಹೋರಾಟಕ್ಕೆ ಮಣಿದ ಮಹಾರಾಷ್ಟ್ರ ಸಚಿವರು? ಬೆಳಗಾವಿ ಭೇಟಿ ರದ್ದು; ಇಂದು ʻಕರವೇ ನಡಿಗೆ ಬೆಳಗಾವಿ ಕಡೆಗೆ’
ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶ
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಳಗಾವಿ ನಗರದತ್ತ ಮುನ್ನುಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚರಿಸುತ್ತಿರುವ ಮಹಾರಾಷ್ಟ್ರ ನೋಂದಣಿಯ 5ಕ್ಕೂ ಹೆಚ್ಚು ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ,
ಪುಣೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಮಹಾರಾಷ್ಟ್ರ ನೋಂದಣಿ ವಾಹನದ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದರು. ಈ ವೇಳೆ ಲಾರಿಯ ಮುಂಭಾಗದ ಗಾಜು ಪುಡಿಪುಡಿಯಾಗಿದೆ.
ಮಹಾರಾಷ್ಟ್ರ ನೋಂದಣಿಯ ಅನೇಕ ವಾಹನಗಳನ್ನು ತಡೆದ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮಹಾರಾಷ್ಟ್ರ ನೋಂದಣಿ ಇರುವ ಫಲಕದ ಮೇಲೂ ಕಪ್ಪುಮಸಿ ಬಳಿದು ಆಕ್ರೋಶ ಹೊರಹಾಕಿದರು.