ಎಂಸಿಡಿ ಚುನಾವಣೆ ಫಲಿತಾಂಶ ಪ್ರಕಟ: ಎಎಪಿಗೆ 134, ಬಿಜೆಪಿ 104, ಕಾಂಗ್ರೆಸ್ ಗೆ 9 ಸ್ಥಾನ
ದೆಹಲಿ ಮಹಾನಗರ ಪಾಲಿಕೆ(ಎಂಸಿಡಿ) ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರಿಲಿದೆ.
Published: 07th December 2022 04:51 PM | Last Updated: 07th December 2022 05:15 PM | A+A A-

ಎಎಪಿ ನಾಯಕರು
ನವದೆಹಲಿ: ದೆಹಲಿ ಮಹಾನಗರ ಪಾಲಿಕೆ(ಎಂಸಿಡಿ) ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರಿಲಿದೆ. ಈ ಮೂಲಕ 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯಗೊಂಡಿದೆ.
ತೀವ್ರ ಕುತೂಹಲ ಕೆರೆಳಿಸಿದ್ದ ಎಂಸಿಡಿ ಚುನಾವಣೆಯಲ್ಲಿ ಬಿಜೆಪಿ ಪೈಪೋಟಿಯ ಹೊರತಾಗಿಯೂ ದೆಹಲಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಆಮ್ ಆದ್ಮಿ ಪಕ್ಷ ಯಶಸ್ವಿಯಾಗಿದೆ.
ಎಂಸಿಡಿಯ ಎಲ್ಲಾ 250 ವಾರ್ಡ್‌ಗಳ ಫಲಿತಾಂಶ ಪ್ರಕಟಿಸಲಾಗಿದ್ದು, ಎಎಪಿ 134 ಸ್ಥಾನ ಪಡೆಯುವ ಮೂಲಕ ಸ್ಪಷ್ಟ ಬಹುಮತ ಗಳಿಸಿದರೆ, ಬಿಜೆಪಿ 104 ಸ್ಥಾನ ಗಳಿಸಿದೆ. ಇನ್ನು ಕಾಂಗ್ರೆಸ್ ಕೇವಲ ಒಂಬತ್ತು ವಾರ್ಡ್‌ಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಈಶಾನ್ಯ ದೆಹಲಿಯ ಸೀಲಾಂಪುರದಿಂದ ಶಕೀಲಾ ಬೇಗಂ ಸೇರಿದಂತೆ ಮೂವರು ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದಾರೆ.
ಇದನ್ನು ಓದಿ: ಗುಜರಾತ್ನಲ್ಲಿ ಎಕ್ಸಿಟ್ ಪೋಲ್ ಭವಿಷ್ಯ ಸುಳ್ಳಾಗಬಹುದು: ಪಂಜಾಬ್ ಸಿಎಂ ಮಾನ್
ದೆಹಲಿಯ 250 ವಾರ್ಡ್ ಗಳ ಪೈಕಿ ಆಮ್ ಆದ್ಮಿ ಪಕ್ಷ 134 ವಾರ್ಡ್ ಗಳಲ್ಲಿ ಜಯಭೇರಿ ಭಾರಿಸಿದ್ದು, ಬಹುಮತಕ್ಕೆ ಅಗತ್ಯವಿರುವ 126 ಸ್ಥಾನಗಳನ್ನು ಮೀರಿ ಇನ್ನೂ 8 ಹೆಚ್ಚುವರಿ ಸ್ಥಾನಗಳೊಂದಿಗೆ ಆಪ್ ಅಧಿಕಾರದ ಗದ್ದುಗೆ ಹಿಡಿಯಲಿದೆ.
ತಮ್ಮ ಪಕ್ಷಕ್ಕೆ ಭರ್ಜರಿ ಬಹುಮತ ನೀಡಿದ ದೆಹಲಿ ಜನತೆಗೆ ಧನ್ಯವಾದ ಹೇಳಿದೆ ಅರವಿಂದ್ ಕೇಜ್ರಿವಾಲ್ ಅವರು, ಕೇಂದ್ರಾಡಳಿತ ಪ್ರದೇಶದಲ್ಲಿ ನಾಗರಿಕ ಸೌಕರ್ಯಗಳನ್ನು ಸುಧಾರಿಸಲು ಬಿಜೆಪಿ ಮತ್ತು ಕಾಂಗ್ರೆಸ್‌ನ ಸಹಕಾರ, ಕೇಂದ್ರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ "ಆಶೀರ್ವಾದ" ಕೋರಿದ್ದಾರೆ.
"ನಾವೆಲ್ಲರೂ ದೆಹಲಿಯ ಸ್ಥಿತಿಯನ್ನು ಸುಧಾರಿಸಬೇಕಾಗಿದೆ. ಹೀಗಾಗಿ ನನಗೆ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಎಲ್ಲರ ಸಹಕಾರ ಬೇಕು. ನಮಗೆ ಎಲ್ಲರ ಸಹಕಾರ ಬೇಕು, ವಿಶೇಷವಾಗಿ ಕೇಂದ್ರ ಮತ್ತು ಪ್ರಧಾನಿ ಮೋದಿಯ ಸಹಾಯ ಮತ್ತು ಆಶೀರ್ವಾದದ ಅಗತ್ಯವಿದೆ" ಎಂದು ಕೇಜ್ರಿವಾಲ್ ಅವರು ತಮ್ಮ ವಿಜಯೋತ್ಸವ ಭಾಷಣದಲ್ಲಿ ಹೇಳಿದ್ದಾರೆ.