ಮಾಂಡೌಸ್ ಚಂಡಮಾರುತದ ಅಬ್ಬರ: ತಮಿಳುನಾಡಿನಲ್ಲಿ ಭಾರೀ ಮಳೆ, ಹಲವು ವಿಮಾನಗಳು ರದ್ದು
ಮಾಂಡೌಸ್ ಚಂಡಮಾರುತವು ತಮಿಳುನಾಡಿನ ಕರಾವಳಿಗೆ ಸಮೀಪಿಸುತ್ತಿರುವ ಕಾರಣ ತಮಿಳುನಾಡಿನ ಹಲವು ಭಾಗಗಳಲ್ಲಿ ಶುಕ್ರವಾರ ಭಾರೀ ಮಳೆಯಾಗಿದೆ ಮತ್ತು ಕೆಲವೆಡೆ ಸಾಧಾರಣ ಮಳೆಯಾಗುತ್ತಿದೆ.
Published: 09th December 2022 04:41 PM | Last Updated: 09th December 2022 07:35 PM | A+A A-

ಸಾಂದರ್ಭಿಕ ಚಿತ್ರ
ಚೆನ್ನೈ: ಮಾಂಡೌಸ್ ಚಂಡಮಾರುತವು ತಮಿಳುನಾಡಿನ ಕರಾವಳಿಗೆ ಸಮೀಪಿಸುತ್ತಿರುವ ಕಾರಣ ತಮಿಳುನಾಡಿನ ಹಲವು ಭಾಗಗಳಲ್ಲಿ ಶುಕ್ರವಾರ ಭಾರೀ ಮಳೆಯಾಗಿದೆ ಮತ್ತು ಕೆಲವೆಡೆ ಸಾಧಾರಣ ಮಳೆಯಾಗುತ್ತಿದೆ. ಮಾಂಡೌಸ್ ಚಂಡಮಾರುತ ಇಂದು ಮಧ್ಯರಾತ್ರಿ ಕರಾವಳಿಯನ್ನು ದಾಟಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇಂದು ಬೆಳಗ್ಗೆ ಚೆನ್ನೈನ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆ(ನುಂಗಂಬಾಕ್ಕಂ ---7 ಸೆಂ.ಮೀ ಸೇರಿದಂತೆ) ಯಾಗುತ್ತಿದ್ದು, ಇಂದು ಸಂಜೆ 6 ರಿಂದ ಮಧ್ಯರಾತ್ರಿಯವರೆಗೆ ಚೆನ್ನೈನಿಂದ ತೆರಳುವ ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಆದಾಗ್ಯೂ, ಸಬ್ ಅರ್ಬನ್ ರೈಲು ಸೇವೆಗಳು ಸೇರಿದಂತೆ ಇತರೆ ರೈಲುಗಳು ಕಾರ್ಯನಿರ್ವಹಿಸಲಿವೆ.
ಇದನ್ನು ಓದಿ: ಮಾಂಡೌಸ್ ಚಂಡಮಾರುತ: ಡಿಸೆಂಬರ್ 13 ರವರೆಗೆ ಬೆಂಗಳೂರಿನಲ್ಲಿ ಮಳೆ, 6 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ
ಮಳೆ ಹಿನ್ನಲೆಯಲ್ಲಿ ಇಂದು ಮತ್ತು ಶನಿವಾರ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಮಾಂಡೌಸ್ ಚಂಡಮಾರುತ ಹಿನ್ನೆಲೆಯಲ್ಲಿ ಚೆನ್ನೈ, ಚೆಂಗಲ್ಪಟ್ಟು, ವಿಲ್ಲುಪುರಂ, ತಿರುವಳ್ಳೂರು, ವೆಲ್ಲೂರು, ಕಡಲೂರು, ರಾಣಿಪೇಟ್, ಕಾಂಚೀಪುರಂ, ಕಲ್ಲಕುರಿಚಿ, ತಂಜಾವೂರು, ತಿರುವರೂರು, ಮೈಲಾಡುತುರೈ, ನಾಗಪಟ್ಟಣಂ, ಅರಿಯಲೂರ್, ಪೆರಂಬಲೂರು, ಪುದುಮೂರು, ಧರ್ಮಪುರ ಸೇರಿ 19 ಜಿಲ್ಲೆಗಳಲ್ಲಿ ಶುಕ್ರವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕಾರೈಕಾಲ್‌ನ ಪೂರ್ವ-ಆಗ್ನೇಯಕ್ಕೆ 350 ಕಿಮೀ ಮತ್ತು ನೈಋತ್ಯ ಬಂಗಾಳ ಕೊಲ್ಲಿಯ ಮೇಲೆ ಚೆನ್ನೈನಿಂದ ಸುಮಾರು 440 ಕಿಮೀ ಆಗ್ನೇಯದಲ್ಲಿ ಕೇಂದ್ರೀಕೃತವಾಗಿರುವ ಚಂಡಮಾರುತವು, ಶುಕ್ರವಾರ ಬೆಳಗಿನವರೆಗೆ ತನ್ನ ತೀವ್ರತೆಯನ್ನು ಕಾಯ್ದುಕೊಂಡು ನಂತರ ಮುಂಜಾನೆ ಚಂಡಮಾರುತವಾಗಿ ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ಐಎಂಡಿ ಮಾಹಿತಿ ನೀಡಿದೆ.