ದೇಶಾದ್ಯಂತ 39 ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್, ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಮ್ಯಾನ್ಮಾರ್‌ನ 11 ಸೋಂಕಿತರಿಗೆ ಚಿಕಿತ್ಸೆ

ಚೀನಾ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಕೋವಿಡ್-19 ಮಹಾಮಾರಿ ವ್ಯಾಪಕವಾಗಿರುವಂತೆಯೇ ಇತ್ತ ದೇಶಾದ್ಯಂತ 39 ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ ಸೋಂಕು ಪತ್ತೆಯಾಗಿದ್ದು, ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಮ್ಯಾನ್ಮಾರ್‌ನ 11 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಚೀನಾ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಕೋವಿಡ್-19 ಮಹಾಮಾರಿ ವ್ಯಾಪಕವಾಗಿರುವಂತೆಯೇ ಇತ್ತ ದೇಶಾದ್ಯಂತ 39 ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ ಸೋಂಕು ಪತ್ತೆಯಾಗಿದ್ದು, ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಮ್ಯಾನ್ಮಾರ್‌ನ 11 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಚೀನಾದಲ್ಲಿ ಕೋವಿಡ್ ಅಬ್ಬರ ಜೋರಾಗಿರುವಂತೆಯೇ ಇತ್ತ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದ್ದು, ಅದರಂತೆ ಇಂದು ದೇಶಾದ್ಯಂತ ವಿವಿಧ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಒಟ್ಟು 39 ಪ್ರಯಾಣಿಕರು ಕೋವಿಡ್ ಸೋಂಕಿಗೆ ತುತ್ತಾಗಿರುವುದು ಕಂಡುಬಂದಿದೆ. ಹಲವಾರು ದೇಶಗಳಿಂದ ದೇಶದ ಪ್ರಮುಖ ನಗರಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಪ್ರಯಾಣಿಕರು ಆಗಮಿಸುತ್ತಿದ್ದು, ಹೀಗೆ ಬಂದ ಪ್ರಯಾಣಿಕರಿಗೆ ಡಿಸೆಂಬರ್ 24 ರಿಂದ ಕೋವಿಡ್ -19 ಆರ್ ಟಿಪಿಸಿಆರ್ ಪರೀಕ್ಷೆ ಮಾಡಲಾಗುತ್ತಿದೆ. ಈ ಪರೀಕ್ಷೆ ವೇಳೆ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಒಟ್ಟು 39 ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್ ಕಂಡುಬಂದಿದೆ.

ಪಾಸಿಟಿವ್ ಬಂದ ಪ್ರಯಾಣಿಕರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಮಾದರಿಯನ್ನು ಜೆನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ರವಾನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಮ್ಯಾನ್ಮಾರ್‌ನ 11 ಸೋಂಕಿತರಿಗೆ ಚಿಕಿತ್ಸೆ, ಬಿಡುಗಡೆ
ಇನ್ನು ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಮ್ಯಾನ್ಮಾರ್ ನ 11 ಪ್ರಯಾಣಿಕರ ಸೋಂಕು ಪರೀಕ್ಷೆ ಪಾಸಿಟಿವ್ ಬಂದಿದ್ದು, ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಪ್ರತ್ಯೇಕಿತ ವಾರ್ಡ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಮ್ಯಾನ್ಮಾರ್‌ನಿಂದ ಇದೇ ಭಾನುವಾರದಂದು 11 ಪ್ರವಾಸಿಗರ ತಂಡ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಅವರ ಆರ್ ಟಿಪಿಸಿಆರ್ ಪರೀಕ್ಷೆ ಪಾಸಿಟಿವ್ ಬಂದಿದ್ದು, ಅವರನ್ನು ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿತ್ತು. ಈಗ ಅವರೆಲ್ಲರ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇತ್ತ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್ ಕಂಡುಬಂದಿದ್ದು, ಎರಡೂ ಮಾದರಿಗಳನ್ನು ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಚೀನಾ ಸೇರಿದಂತೆ ಕೆಲವು ದೇಶಗಳಲ್ಲಿ ಕೊರೊನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶನಿವಾರದಿಂದ ಪ್ರತಿ ಅಂತಾರಾಷ್ಟ್ರೀಯ ವಿಮಾನದಲ್ಲಿ ಬರುವ ಶೇಕಡಾ ಎರಡರಷ್ಟು ಪ್ರಯಾಣಿಕರಿಗೆ ಸರ್ಕಾರವು ಆರ್ ಟಿಪಿಸಿಆರ್ ಕೊರೊನಾವೈರಸ್ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com