ಒಡಿಶಾದಲ್ಲಿ ರಷ್ಯ ಪ್ರಜೆಗಳ ದಹನ ಸಂಸ್ಕಾರವನ್ನು ಪ್ರಶ್ನಿಸಿದ ಕಾಂಗ್ರೆಸ್ ಸಂಸದನಿಗೆ ರಷ್ಯಾ ರಾಯಭಾರಿ ಪಾಠ 

ಒಡಿಶಾದಲ್ಲಿ ಇತ್ತೀಚೆಗೆ ಇಬ್ಬರು ರಷ್ಯಾ ಪ್ರಜೆಗಳ ಅನುಮಾನಾಸ್ಪದ ಸಾವು ಹಾಗೂ ಅವರ ಅಂತ್ಯ ಸಂಸ್ಕಾರದ ವಿಷಯ ಈಗ ಕಾಂಗ್ರೆಸ್ ಸಂಸದರ ಪ್ರಶ್ನೆಯೊಂದರಿಂದ ವಿವಾದಕ್ಕೆ ಗ್ರಾಸವಾಗಿದೆ.
ರಷ್ಯಾ ರಾಯಭಾರಿ ಕಚೇರಿ (ಸಂಗ್ರಹ ಚಿತ್ರ)
ರಷ್ಯಾ ರಾಯಭಾರಿ ಕಚೇರಿ (ಸಂಗ್ರಹ ಚಿತ್ರ)

ನವದೆಹಲಿ: ಒಡಿಶಾದಲ್ಲಿ ಇತ್ತೀಚೆಗೆ ಇಬ್ಬರು ರಷ್ಯಾ ಪ್ರಜೆಗಳ ಅನುಮಾನಾಸ್ಪದ ಸಾವು ಹಾಗೂ ಅವರ ಅಂತ್ಯ ಸಂಸ್ಕಾರದ ವಿಷಯ ಈಗ ಕಾಂಗ್ರೆಸ್ ಸಂಸದರ ಪ್ರಶ್ನೆಯೊಂದರಿಂದ ವಿವಾದಕ್ಕೆ ಗ್ರಾಸವಾಗಿದೆ.
 
ರಷ್ಯಾದ ಇಬ್ಬರು ಪ್ರಜೆಗಳ ಸಾವಿನ ಬಗ್ಗೆ ಒಡಿಶಾದ ಸ್ಥಳೀಯ ಪೊಲೀಸರು ಹೇಳಿಕೆ ನೀಡಿದ್ದು, ಅನುಮಾನಾಸ್ಪದವಾದದ್ದು ಈ ವರೆಗೂ ಏನು ಕಂಡುಬಂದಿಲ್ಲ ಹಾಗೂ ಜನರಿಗೆ ಈ ಬಗ್ಗೆ ಮಾತನಾಡದಂತೆ ನಿರ್ಬಂಧವನ್ನೂ ವಿಧಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 

ಈ ನಡುವೆ ಕಾಂಗ್ರೆಸ್ ಸಂಸದ ಮನೀಷ್ ತಿವಾರಿ ರಷ್ಯಾ ಪ್ರಜೆಗಳ ಅಂತ್ಯಸಂಸ್ಕಾರದ ವಿಧಿಯ ಬಗ್ಗೆ ಮಾತನಾಡಿ ರಷ್ಯಾ ರಾಯಭಾರಿ ಕಚೇರಿ ಅಧಿಕಾರಿಯಿಂದ ಪಾಠ ಮಾಡಿಸಿಕೊಂಡಿದ್ದಾರೆ. 

ಇಬ್ಬರು ಕ್ರೈಸ್ತರಿಗೆ ದಹನ ಕ್ರಿಯೆ ಮೂಲಕ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಏಕೆ?  ದಹನಗೊಂಡ ಶವಗಳು ಯಾವುದೇ ಕಥೆಯನ್ನೂ ಬಿಟ್ಟುಹೋಗುವುದಿಲ್ಲ ಅಥವ ಹೇಳುವುದಿಲ್ಲ ಎನ್ನುತ್ತಾರೆ ಹರ್ಕ್ಯುಲ್ ಪೊಯ್ರೊಟ್ ಎಂದು ತಮ್ಮ ಹೇಳಿಕೆಯನ್ನು ತಿವಾರಿ ಸಮರ್ಥಿಸಿಕೊಂಡಿದ್ದಾರೆ. 

ಹರ್ಕ್ಯುಲ್ ಪೊಯ್ರೊಟ್  ಬ್ರಿಟನ್ ಬರಹಗಾರ ಅಗಾಥಾ ಕ್ರಿಸ್ಟಿ ಎಂಬುವವರು ಸೃಷ್ಟಿಸಿದ ಕಾಲ್ಪನಿಕ ಬೆಲ್ಜಿಯನ್ ಪತ್ತೇದಾರಿ ಪಾತ್ರವಾಗಿದ್ದಾನೆ.
 
ಮನೀಷ್ ತಿವಾರಿ ಪ್ರಶ್ನೆಗೆ ರಷ್ಯಾ ರಾಯಭಾರಿ ಡೆನಿಸ್ ಅಲಿಪೋವ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು,  "ಒಡಿಶಾದಲ್ಲಿ ಸಾವನ್ನಪ್ಪಿದ ರಷ್ಯಾ ಪ್ರಜೆಗಳ ಬಗ್ಗೆ ಭಾರತೀಯ ಅಧಿಕಾರಿಗಳ ತನಿಖೆ ಪ್ರಯತ್ನವನ್ನು ನಾವು ಶ್ಲಾಘಿಸುತ್ತೇವೆ. ಇದೇ ವೇಳೆ, ರಷ್ಯಾದ ಸಂಸ್ಕೃತಿಯಲ್ಲಿ ಮೃತ ವ್ಯಕ್ತಿಗೆ ದಹನ ಕ್ರಿಯೆ ಮೂಲಕ ಅಂತ್ಯಸಂಸ್ಕಾರ ನೆಡೆಸುವುದು ದಫನ ವಿಧಿವಿಧಾನಗಳ ಮೂಲಕ ಅಂತ್ಯಸಂಸ್ಕಾರ ನೆರವೇರಿಸುವಷ್ಟೇ ಸಹಜವಾದುದ್ದಾಗಿದೆ, ಖಾಲಿ ಕೂರುವುದು ಎಲ್ಲಾ ಕೆಡುಕಿನ ಮೂಲವಾಗಿದೆ" ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. 

ಅಚ್ಚರಿ ಎಂದರೆ, ತಿವಾರಿ ರಷ್ಯಾ ರಾಯಭಾರಿ ಡೆನಿಸ್ ಅಲಿಪೋವ್ ಅವರ ಪ್ರತಿಕ್ರಿಯೆಗೆ ಮತ್ತೆ ಪ್ರತಿಕ್ರಿಯೆ ನೀಡಿದ್ದು, ಸಾಂಪ್ರದಾಯಿಕ ಕ್ರಿಶ್ಚಿಯನ್ ಮಾಹಿತಿ ಕೇಂದ್ರವನ್ನು ಉಲ್ಲೇಖಿಸಿ, ಮೃತದೇಹಗಳಿಗೆ ದಹನ ಕ್ರಿಯೆ ಮೂಲಕ ಅಂತ್ಯಸಂಸ್ಕಾರ ನೆರವೇರಿಸುವುದು ಚರ್ಚ್ ನ ದೃಷ್ಟಿಯಿಂದ ಸಮ್ಮತವಲ್ಲದ ಕ್ರಿಯೆ ಎಂದು ವಾದಿಸಿದ್ದಾರೆ. ಇಬ್ಬರು ರಷ್ಯನ್ನರು ಹೊಟೆಲ್ ನ ಕೊಠಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ವಿಪರೀತ ಮದ್ಯ ಸೇವನೆಯ ಪರಿಣಾಮ ಈ ಅನಾಹುತ ಸಂಭವಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com