ಮಹಾರಾಷ್ಟ್ರ: ಉದಯಪುರ್ ಟೈಲರ್ ಹತ್ಯೆ ಬೆನ್ನಲ್ಲೇ ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ ಹಾಕಿದ್ದ ಕೆಮಿಸ್ಟ್ ಹತ್ಯೆ!

ಉದಯಪುರ್ ಟೈಲರ್ ಹತ್ಯೆ ಪ್ರಕರಣ ಹಸಿರಾಗಿರುವಂತೆಯೇ ಮಹಾರಾಷ್ಟ್ರದಲ್ಲೂ ಅಂತಹುದೇ ಘಟನೆ ನಡೆದಿದ್ದು, ನೂಪುರ್ ಶರ್ಮಾ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಕೆಮಿಸ್ಟ್ ಒಬ್ಬರನ್ನು ಹತ್ಯೆ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನಾಗ್ಪುರ: ಉದಯಪುರ್ ಟೈಲರ್ ಹತ್ಯೆ ಪ್ರಕರಣ ಹಸಿರಾಗಿರುವಂತೆಯೇ ಮಹಾರಾಷ್ಟ್ರದಲ್ಲೂ ಅಂತಹುದೇ ಘಟನೆ ನಡೆದಿದ್ದು, ನೂಪುರ್ ಶರ್ಮಾ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಕೆಮಿಸ್ಟ್ ಒಬ್ಬರನ್ನು ಹತ್ಯೆ ಮಾಡಲಾಗಿದೆ.

ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ 54 ವರ್ಷದ ಮೆಡಿಕಲ್ ಸ್ಟೋರ್ ವ್ಯಾಪಾರಿಯನ್ನು ಚಾಕುವಿನಿಂದ ಇರಿದು ದುಷ್ಕರ್ಮಿಗಳು ಹತ್ಯೆ ಮಾಡಿದ್ದು, ನೂಪುರ್ ಶರ್ಮಾ ಅವರ ಹೇಳಿಕೆಗಳನ್ನು ಬೆಂಬಲಿಸಿ ಸಾಮಾಜಿಕ ಸಂದೇಶ ವೇದಿಕೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ದುಷ್ಕರ್ಮಿಗಳು ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.  ಮೆಡಿಕಲ್ ಸ್ಟೋರ್ ವ್ಯಾಪಾರಿ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ ಅವರನ್ನು ಜೂನ್ 21 ರಂದು ಕೊಲ್ಲಲಾಗಿದ್ದು, ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಅಂತೆಯೇ ಮತ್ತೋರ್ವ ಪ್ರಮುಖ ಆರೋಪಿ ಇರ್ಫಾನ್ ಖಾನ್ (32) ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಮರಾವತಿ ಪೊಲೀಸ್ ಕಮಿಷನರ್ ಡಾ.ಆರತಿ ಸಿಂಗ್ ಶನಿವಾರ ತಿಳಿಸಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಆಗಿದ್ದ ಕನ್ಹಯ್ಯಾ ಲಾಲ್ ಎಂಬಾತನನ್ನು ಇಬ್ಬರು ವ್ಯಕ್ತಿಗಳು ಇಸ್ಲಾಂ ಧರ್ಮಕ್ಕೆ ಮಾಡಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದೇವೆ ಎಂದು ಹೇಳುವ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವ ಮೊದಲು ಅವರ ಅಂಗಡಿಯಲ್ಲಿ ಕತ್ತು ಸೀಳಿ ಕೊಂದ ಘಟನೆ ಒಂದು ವಾರದ ಬಳಿಕ ಈ ಘಟನೆ ನಡೆದಿದೆ.

"ಕೊಲ್ಹೆ ಅಮರಾವತಿ ನಗರದಲ್ಲಿ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದರು. ಅವರು ನೂಪುರ್ ಶರ್ಮಾ ಅವರ ಕಾಮೆಂಟ್‌ಗಳಿಗಾಗಿ ಕೆಲವು ವಾಟ್ಸಾಪ್ ಗುಂಪುಗಳಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದರು ಎನ್ನಲಾಗಿದೆ. ಅಲ್ಲದೆ ಅವರು ತಮ್ಮ ಗ್ರಾಹಕರು ಸೇರಿದಂತೆ ಕೆಲವು ಮುಸ್ಲಿಮರು ಸಹ ಸದಸ್ಯರಾಗಿರುವ ವಾಟ್ಸಾಪ್ ಗುಂಪಿನಲ್ಲಿ ಪೋಸ್ಟ್ ಅನ್ನು ತಪ್ಪಾಗಿ ಹಂಚಿಕೊಂಡಿದ್ದಾರೆ. ಇದು ಅವರ ಕೊಲೆಗೆ ಕಾರಣವಾಗಿರಬಹುದು ಎಂದು ಸಿಟಿ ಕೊತ್ವಾಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಮುಖ ಆರೋಪಿ ಇರ್ಫಾನ್ ಖಾನ್ ಕೊಲ್ಹೆಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಮತ್ತು ಅದಕ್ಕಾಗಿ ಐದು ಜನ ದುಷ್ಕರ್ಮಿಗಳಿಗೆ ತಲಾ 10 ಸಾವಿರ ರೂಪಾಯಿ ನೀಡಿದ್ದ. ಮತ್ತು ಕೊಲೆ ಬಳಿಕ ಸುರಕ್ಷಿತವಾಗಿ ಕಾರಿನಲ್ಲಿ ಪರಾರಿಯಾಗಲು ನೆರವಾಗಿದ್ದ ಎನ್ನಲಾಗಿದೆ. ಜೂನ್ 21 ರಂದು ರಾತ್ರಿ 10 ರಿಂದ ರಾತ್ರಿ 10.30 ರ ನಡುವೆ ಕೊಲ್ಹೆ ತನ್ನ ಅಂಗಡಿಯನ್ನು ಮುಚ್ಚಿ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದಾಗ ಆತನನ್ನು ಕೊಲೆ ಮಾಡಲಾಗಿದೆ.

ಮಹಿಳಾ ಕಾಲೇಜಿನ ಗೇಟ್ ಬಳಿಗೆ ಬಂದಾಗ, ಹಿಂದಿನಿಂದ ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೋಲ್ಹೆಯ ಮಾರ್ಗವನ್ನು ತಡೆದರು. ಯುವಕನೊಬ್ಬ ಮೋಟಾರು ಸೈಕಲ್‌ನಿಂದ ಇಳಿದು ಕೊಲ್ಹೆಯ ಕುತ್ತಿಗೆಗೆ ಹರಿತವಾದ ಆಯುಧದಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ತಂದೆಯನ್ನು ಪುತ್ರ ಸಾಕೇತ್ ಆಸ್ಪತ್ರೆಗೆ ಸಾಗಿಸಿದ್ದಾರೆಯಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದರು ಎಂದು ಅಧಿಕಾರಿ ಹೇಳಿದರು.

ಸಾಕೇತ್ ಅವರ ದೂರಿನ ಆಧಾರದ ಮೇಲೆ, ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಆರೋಪಿಗಳನ್ನು ಅಮರಾವತಿಯ ನಿವಾಸಿಗಳಾದ ಮುದಸಿರ್ ಅಹಮದ್ (22), ಶಾರುಖ್ ಪಠಾಣ್ (25), ಅಬ್ದುಲ್ ತೌಫಿಕ್ (24) ಶೋಯಬ್ ಖಾನ್ (22) ಮತ್ತು ಅತಿಬ್ ರಶೀದ್ (22) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.  ಪೊಲೀಸರು ಅಪರಾಧಕ್ಕೆ ಬಳಸಿದ ಚಾಕುವನ್ನು ವಶಪಡಿಸಿಕೊಂಡಿದ್ದು, ಘಟನೆ ಕುರಿತಂತೆ ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಂಡಿದ್ದಾರೆ. ಕೊಲೆಯ ಹಿಂದಿನ ನಿಖರವಾದ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಸಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com