ಬಿಜೆಪಿಯ ಪ್ರಮುಖ ನಾಯಕನೊಂದಿಗೆ ಕನ್ಹಯ್ಯ ಹತ್ಯೆ ಆರೋಪಿಯ ಫೋಟೋ ವೈರಲ್: ಪಕ್ಷ ಈ ಬಗ್ಗೆ ಹೇಳೋದೇನು...? 

ಕನ್ಹಯ್ಯ ಲಾಲ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಸಂಬಂಧಿಸಿದಂತೆ ದಿನಕ್ಕೊಂದು ಅಚ್ಚರಿಯ ಮಾಹಿತಿಗಳು ಬಹಿರಂಗವಾಗತೊಡಗಿದೆ. 
ಬಿಜೆಪಿ ನಾಯಕನೊಂದಿಗೆ ಉದಯ್ ಪುರದ ಹಂತಕ
ಬಿಜೆಪಿ ನಾಯಕನೊಂದಿಗೆ ಉದಯ್ ಪುರದ ಹಂತಕ

ಜೈಪುರ:  ಕನ್ಹಯ್ಯ ಲಾಲ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಸಂಬಂಧಿಸಿದಂತೆ ದಿನಕ್ಕೊಂದು ಅಚ್ಚರಿಯ ಮಾಹಿತಿಗಳು ಬಹಿರಂಗವಾಗತೊಡಗಿದೆ. 

ರಾಜಸ್ಥಾನದಲ್ಲಿ ವಿಪಕ್ಷ ನಾಯಕರೂ ಆಗಿರುವ, ಬಿಜೆಪಿಯ ನಾಯಕ ಗುಲಾಬ್ ಚಂದ್ ಕಟಾರಿಯಾ ಅವರೊಂದಿಗೆ ಕನ್ಹಯ್ಯ ಲಾಲ್ ಹತ್ಯೆ ಪ್ರಕರಣದ ಆರೋಪಿ ರಿಯಾಜ್ ಅಟ್ಟಾರಿ ತೆಗೆಸಿಕೊಂಡಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ. 

ಈ ಫೋಟೊ 2018 ರ ಕಾರ್ಯಕ್ರಮವೊಂದರಲ್ಲಿ ಕ್ಲಿಕ್ಕಿಸಲಾಗಿದ್ದು ಎಂದು ತಿಳಿದುಬಂದಿದೆ. ಇದಕ್ಕೆ ಪೂರಕವೆಂಬಂತೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕರ್ತನೋರ್ವನ ಹಳೆಯ ಪೋಸ್ಟ್ ನಲ್ಲಿ ಆಟ ರಿಯಾಜ್ ನ್ನು ಬಿಜೆಪಿ ಕಾರ್ಯಕರ್ತ ಎಂದೇ ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ.
 
ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯ ಅಲ್ಪಸಂಖ್ಯಾತ ವಿಭಾಗದ ನಾಯಕರು ರಿಯಾಜ್ ನೊಂದಿಗೆ ಹಲವು ಬಾರಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ತಾಹಿರ್ ಎಂಬಾತ ನವೆಂಬರ್ 2019 ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು, ನಮ್ಮ ಸಹೋದರ ರಿಯಾಜ್ ಅಟ್ಟಾರಿ, ಬಿಜೆಪಿ ಕಾರ್ಯಕರ್ತನಾಗಿದ್ದು, ಆತನನ್ನು ಉದಯ್ ಪುರದ ಉಮ್ರಾದ ಜಿಯಾರತ್ ನಿಂದ ಸ್ವಾಗತಿಸಲಾಯಿತು. ರಿಯಾಜ್ ಅಟ್ಟಾರಿ ಸಹೋದರನ ಪ್ರಾರ್ಥನೆಗಳನ್ನು ಅಲ್ಲಾ ಈಡೇರಿಸಲಿ" ಎಂದು ಹೇಳಿದ್ದರು. 

2019 ರ ನವೆಂಬರ್ 25 ರಂದು ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಲಾಗಿದ್ದ ಈ ಪೋಸ್ಟ್ ನಲ್ಲಿ ತಾಹಿರ್ ಹಾಗೂ ಚೈನ್ವಾಲಾ ಹಾಗೂ ಮತ್ತೋರ್ವ ಬಿಜೆಪಿ ನಾಯಕರು ರಿಯಾಜ್ ಗೆ ಹೂ ಮಾಲೆ ಹಾಕುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ.

ಇದಷ್ಟೇ ಅಲ್ಲದೇ ತಾಹಿರ್ ಎಂಬಾತನ ಫೇಸ್ ಬುಕ್ ಖಾತೆಯಲ್ಲಿ ಹಲವು ಬಾರಿ ರಿಯಾಜ್ ಅಟ್ಟಾರಿ ಹೆಸರನ್ನು ಉಲ್ಲೇಖಿಸಲಾಗಿದೆ. ಆದರೆ ಈ ಫೇಸ್ ಬುಕ್ ಖಾತೆ ಈಗ ನಾಪತ್ತೆಯಾಗಿದೆ. ಈ ಬಗ್ಗೆ ಮಾತನಾಡಿರುವ ಇರ್ಶಾದ್ ಚೈನ್ವಾಲ ಎಂಬಾತ ತನಗೂ ರಿಯಾಜ್ ಗೂ ಯಾವುದೇ ಸಂಪರ್ಕ ಇಲ್ಲ. ಆತ ಉಮ್ರಾ ಪೂರ್ಣಗೊಳಿಸಿದ ಬಳಿಕ ಮೆಕ್ಕಾ-ಮದೀನಾದಿಂದ ವಾಪಸ್ಸಾಗಿದ್ದ. ಆದ್ದರಿಂದ ಆತನನ್ನು ಹೂ ಮಾಲೆ ಹಾಕಲಾಗಿತ್ತು, ನನಗೆ ರಿಯಾಜ್ ನ್ನು ತಾಹಿರ್ ಪರಿಚಯಿಸಿದ್ದ ಎಂದು ಹೇಳಿದ್ದಾರೆ. 

ರಿಯಾಜ್ ನ ಫೋಟೋ ಉದಯ್ ಪುರ ಬಿಜೆಪಿ ಜಿಲ್ಲಾ ಅಧ್ಯಕ್ಷ ರವೀಂದ್ರ ಶ್ರೀಮಾಲಿ ಅವರೊಂದಿಗೂ ಕಂಡುಬಂದಿದ್ದು, ಪಕ್ಷಕ್ಕೂ ರಿಯಾಜ್ ಗೂ ಸಂಬಂಧವಿಲ್ಲ ಎಂದು ರವೀಂದ್ರ ಸ್ಪಷ್ಟನೆ ನೀಡಿದ್ದಾರೆ. ರಿಯಾಜ್ ಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ. ಆತ ನಮ್ಮ ಪಕ್ಷದ ಸದಸ್ಯನಲ್ಲ. ಗುಂಪಿನಲ್ಲಿ ಯಾರೋ ಬಂದು ಫೋಟೋ ತೆಗೆಸುಕೊಂಡರೆ ಅವರೆಲ್ಲಾ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದಾರೆ ಅಂತ ಅಲ್ಲ. ವಿಪಕ್ಷಗಳು ಈ ವಿಷಯದಲ್ಲಿ ಷಡ್ಯಂತ್ರ ಮಾಡುತ್ತಿವೆ. ಈ ವಿಷಯದಲ್ಲಿ ಯಾವುದೇ ತನಿಖಾ ಸಂಸ್ಥೆಯಿಂದ ತನಿಖೆ ಎದುರಿಸಲು ನಾವು ಸಿದ್ಧರಿದ್ದೇವೆ" ಎಂದು ಹೇಳಿದ್ದಾರೆ.

ರಾಜಸ್ಥಾನದ ಬಿಜೆಪಿಯೂ ಈ ಆರೋಪಗಳನ್ನು ನಿರಾಕರಿಸಿದ್ದು, ಹಂತಕರಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದೆ. 

"ರಾಜಸ್ಥಾನ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಎಂ ಸಾದಿಕ್ ಖಾನ್ ಮಾತನಾಡಿ, ಬಿಜೆಪಿ ಜಗತ್ತಿನಲ್ಲೇ ಅತಿ ದೊಡ್ಡ ಪಕ್ಷವಾಗಿದ್ದು ಯಾರು ಬೇಕಾದರೂ ನಮ್ಮ ನಾಯಕರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಿರುತ್ತಾರೆ. ಹಾಗಂತ ಫೋಟೋ ತೆಗೆಸಿಕೊಂಡವರಿಗೆಲ್ಲಾ ಪಕ್ಷದೊಂದಿಗೆ ಸಂಪರ್ಕ ಇದೆ ಅಂತಲ್ಲ. ಹಂತಕ ಎಂದಿಗೂ ನಮ್ಮ ಪಕ್ಷದೊಂದಿಗೆ ಸಂಪರ್ಕ ಹೊಂದಿರಲಿಲ್ಲ, ಸರ್ಕಾರ ತನ್ನ ವೈಫಲ್ಯ ಮುಚ್ಚಿಡಲು ಈ ರೀತಿ ಆರೋಪಗಳಲ್ಲಿ ತೊಡಗಿದೆ" ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com