ಕೇಂದ್ರ ಸರ್ಕಾರದ 'ಅಗ್ನಿಪಥ' ಯೋಜನೆ ಪ್ರಶ್ನಿಸಿ ಅರ್ಜಿ: ಸುಪ್ರೀಂ ಕೋರ್ಟ್ ನಲ್ಲಿ ಮುಂದಿನ ವಾರ ವಿಚಾರಣೆ
ದೇಶದ ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಕೇಂದ್ರ ಸರ್ಕಾರದ 'ಅಗ್ನಿಪಥ' ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಮುಂದಿನ ವಾರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.
Published: 04th July 2022 01:44 PM | Last Updated: 04th July 2022 02:46 PM | A+A A-

ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ರೈಲಿನ ಬೋಗಿಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ವಿರುದ್ಧ ನಡೆಸಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು
ನವದೆಹಲಿ: ದೇಶದ ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಕೇಂದ್ರ ಸರ್ಕಾರದ 'ಅಗ್ನಿಪಥ' ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಮುಂದಿನ ವಾರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆಕೆ ಮಹೇಶ್ವರಿ ಅವರ ರಜಾಕಾಲದ ಪೀಠವು ಮುಂದಿನ ವಾರ ಸೂಕ್ತ ಪೀಠದ ಮುಂದೆ ಅರ್ಜಿಗಳನ್ನು ವಿಚಾರಣೆಗೆ ಮಂಡಿಸಲಾಗುವುದು ಎಂದು ಹೇಳಿದೆ.
ಭಾರತೀಯ ವಾಯುಪಡೆಯ ಆಕಾಂಕ್ಷಿಗಳು ತರಬೇತಿ ಪಡೆದು ನೇಮಕಾತಿ ಪತ್ರಗಳಿಗಾಗಿ ಕಾಯುತ್ತಿದ್ದಾರೆ. ಆದರೆ ಈಗ ಅವರ ವೃತ್ತಿಜೀವನವನ್ನು 20 ವರ್ಷಗಳಿಂದ ನಾಲ್ಕು ವರ್ಷಗಳಿಗೆ ಮೊಟಕುಗೊಳಿಸಿರುವುದು ಅವರ ವೃತ್ತಿಜೀವನಕ್ಕೆ ಧಕ್ಕೆಯಾಗಿದೆ ಎಂದು ಅಗ್ನಿಪಥ ಯೋಜನೆಯ ವಿರುದ್ಧ ಅರ್ಜಿ ಸಲ್ಲಿಸಿದ ವಕೀಲರೊಬ್ಬರು ಹೇಳಿದ್ದಾರೆ. ಇದು ತುರ್ತು ವಿಷಯವಾಗಿದ್ದು, ವಿಚಾರಣೆ ನಡೆಸಬೇಕು. ಹಲವು ಆಕಾಂಕ್ಷಿಗಳ ವೃತ್ತಿಬದುಕು ಅಪಾಯದಲ್ಲಿದೆ ಎಂದು ವಕೀಲರು ಹೇಳಿದ್ದಾರೆ.
ಈ ಯೋಜನೆಯನ್ನು ಪ್ರಶ್ನಿಸಿ ಪಿಐಎಲ್ ಸಲ್ಲಿಸಿರುವ ವಕೀಲ ಎಂಎಲ್ ಶರ್ಮಾ, ತರಬೇತಿ ಪಡೆದ 70,000 ಕ್ಕೂ ಹೆಚ್ಚು ಆಕಾಂಕ್ಷಿಗಳು ಕೋವಿಡ್ ಸಾಂಕ್ರಾಮಿಕ ರೋಗದ ಮೊದಲು ತಮ್ಮ ನೇಮಕಾತಿ ಪತ್ರಗಳಿಗಾಗಿ ಕಾಯುತ್ತಿದ್ದಾರೆ. ಈಗ ಕೇಂದ್ರ ಸರ್ಕಾರದ ಯೋಜನೆಯಿಂದ ಅವರ ವೃತ್ತಿಜೀವನ ಕುಂಠಿತವಾಗುತ್ತದೆ ಎಂದಿದ್ದಾರೆ.
ಅದಕ್ಕೆ ನ್ಯಾಯಪೀಠ, ನೀವು ಎರಡು ವರ್ಷಕ್ಕಿಂತ ಹೆಚ್ಚು ಕಾಲ ಕಾಯುತ್ತಿರುವಾಗ ರಜಾಪೀಠದ ಮುಂದೆ ಏಕೆ ಬರುತ್ತೀರಿ ಎಂದು ಇತರ ವಿಷಯಗಳ ಜೊತೆಗೆ ಸೂಕ್ತ ಪೀಠದ ಮುಂದೆ ಶರ್ಮಾ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ಪಟ್ಟಿ ಮಾಡಿದೆ. ಸಂವಿಧಾನಾತ್ಮಕ ನಿಬಂಧನೆಗಳಿಗೆ ವಿರುದ್ಧವಾದ ಶತಮಾನಗಳಷ್ಟು ಹಳೆಯದಾದ ಸಶಸ್ತ್ರ ಪಡೆಗಳ ಆಯ್ಕೆ ಪ್ರಕ್ರಿಯೆಯನ್ನು ಸರ್ಕಾರ ರದ್ದುಗೊಳಿಸಿದೆ ಎಂದು ಪಿಐಎಲ್‌ನಲ್ಲಿ ಶರ್ಮಾ ಆರೋಪಿಸಿದ್ದಾರೆ.
ಇದನ್ನೂ ಓದಿ: ಅಗ್ನಿಪಥ್ ಯೋಜನೆಗೆ ವಿರೋಧ: ಪ್ರಧಾನಿ ಮೋದಿಗೆ 420 ರೂ. ಚೆಕ್ ಕಳುಹಿಸಿದ ಎಎಪಿ!
ಕಳೆದ ಜೂನ್ 14 ರಂದು ಘೋಷಿಸಲಾದ ಅಗ್ನಿಪಥ್ ಯೋಜನೆಯು ಹದಿನೇಳೂವರೆ ವರ್ಷದಿಂದ 25ವರ್ಷದೊಳಗಿನ ಯುವಕರನ್ನು ಕೇವಲ ನಾಲ್ಕು ವರ್ಷಗಳವರೆಗೆ ನೇಮಕಾತಿ ಮಾಡಲಾಗುತ್ತದೆ. ಅವರಲ್ಲಿ ಶೇಕಡಾ 25 ರಷ್ಟನ್ನು ಇನ್ನೂ 15 ವರ್ಷಗಳವರೆಗೆ ಉಳಿಸಿಕೊಳ್ಳುವ ಅವಕಾಶವಿದೆ. ಈ ಯೋಜನೆ ವಿರುದ್ಧ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದು ತೀವ್ರ ಹಿಂಸಾಚಾರ ಸಂಭವಿಸಿ ಸಾವು ಕೂಡ ಸಂಭವಿಸಿತ್ತು.
ಆರಂಭದಲ್ಲಿ 21 ವರ್ಷದವರೆಗೆ ನೇಮಕಾತಿ ಎಂದು ಅಧಿಸೂಚನೆ ಹೊರಡಿಸಿದ್ದ ಕೇಂದ್ರ ಸರ್ಕಾರ ತೀವ್ರ ಪ್ರತಿಭಟನೆ ಎದುರಾದ ನಂತರ ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ವಿಸ್ತರಿಸಿತು.
ಈ ಹಿಂದೆ, ಯೋಜನೆ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳ ಸಂದರ್ಭದಲ್ಲಿ ರೈಲ್ವೆ ಸೇರಿದಂತೆ ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಹಿಂಸಾತ್ಮಕ ಪ್ರತಿಭಟನೆಗಳ ಸ್ಥಿತಿಗತಿ ವರದಿಯನ್ನು ಸಲ್ಲಿಸಲು ಕೇಂದ್ರ ಮತ್ತು ಉತ್ತರ ಪ್ರದೇಶ, ತೆಲಂಗಾಣ, ಬಿಹಾರ, ಹರಿಯಾಣ ಮತ್ತು ರಾಜಸ್ಥಾನ ಸರ್ಕಾರಗಳಿಗೆ ನಿರ್ದೇಶನಗಳನ್ನು ಮನವಿಯಲ್ಲಿ ಕೋರಲಾಗಿದೆ.