ಅಮರನಾಥ ಮೇಘಸ್ಫೋಟ: ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ, ಸಿಲುಕಿದ್ದ 15 ಸಾವಿರ ಯಾತ್ರಿಕರು ಸ್ಥಳಾಂತರ

ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಿಂದಾಗಿ ಜಮ್ಮು ಮತ್ತು ಕಾಶ್ಮೀರದ ಅಮರನಾಥ ಪವಿತ್ರ ಗುಹೆಯ ಬಳಿ ಸಿಲುಕಿಕೊಂಡಿದ್ದ ಕನಿಷ್ಠ 15 ಸಾವಿರ ಯಾತ್ರಾರ್ಥಿಗಳನ್ನು ಪಂಜತರ್ನಿಯ ಕೆಳಗೆ ಮೂಲ ಶಿಬಿರಕ್ಕೆ  ಸ್ಥಳಾಂತರಿಸಲಾಗಿದೆ ಎಂದು ಐಟಿಬಿಪಿ ವಕ್ತಾರರು ಶನಿವಾರ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅಮರನಾಥ ಗುಹೆಯ ದೇಗುಲದ ಸಮೀಪವಿರುವ ಮೇಘಸ್ಫೋಟ ಪೀಡಿತ ಪ್ರದೇಶಗಳಲ್ಲಿ ಸೇನಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವುದು
ಜಮ್ಮು ಮತ್ತು ಕಾಶ್ಮೀರದ ಅಮರನಾಥ ಗುಹೆಯ ದೇಗುಲದ ಸಮೀಪವಿರುವ ಮೇಘಸ್ಫೋಟ ಪೀಡಿತ ಪ್ರದೇಶಗಳಲ್ಲಿ ಸೇನಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವುದು

ನವದೆಹಲಿ/ಶ್ರೀನಗರ: ಮೇಘಸ್ಫೋಟದಿಂದ (Amarnath cloudburst) ಉಂಟಾದ ಹಠಾತ್ ಪ್ರವಾಹದಿಂದಾಗಿ ಜಮ್ಮು ಮತ್ತು ಕಾಶ್ಮೀರದ ಅಮರನಾಥ ಪವಿತ್ರ ಗುಹೆಯ ಬಳಿ ಸಿಲುಕಿಕೊಂಡಿದ್ದ ಕನಿಷ್ಠ 15 ಸಾವಿರ ಯಾತ್ರಾರ್ಥಿಗಳನ್ನು ಪಂಜತರ್ನಿಯ ಕೆಳಗೆ ಮೂಲ ಶಿಬಿರಕ್ಕೆ  ಸ್ಥಳಾಂತರಿಸಲಾಗಿದೆ ಎಂದು ಐಟಿಬಿಪಿ ವಕ್ತಾರರು ಶನಿವಾರ ತಿಳಿಸಿದ್ದಾರೆ.

ಗಡಿ ಕಾವಲು ಪಡೆ(BSF) ತನ್ನ ಮಾರ್ಗ ತೆರೆಯುವಿಕೆ ಮತ್ತು ರಕ್ಷಣಾ ಕಾರ್ಯಗಳನ್ನು ಪವಿತ್ರ ಗುಹೆಯ ಕೆಳಗಿನ ಭಾಗದಿಂದ ಪಂಜತರ್ನಿಯವರೆಗೆ ವಿಸ್ತರಿಸಿದೆ ಎಂದು ಹೇಳಿದ್ದಾರೆ. ದಕ್ಷಿಣ ಕಾಶ್ಮೀರದ ಅಮರನಾಥದ ಪವಿತ್ರ ಗುಹೆ ದೇಗುಲದ ಬಳಿ ಉಂಟಾದ ತೀವ್ರ ಪ್ರವಾಹದಿಂದ ನಿನ್ನೆ ಶುಕ್ರವಾರ ಸಾಯಂಕಾಲ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ. 

ನಿನ್ನೆ ಸಾಯಂಕಾಲ ಭವಿಸಿದ ಹಠಾತ್ ಪ್ರವಾಹದಿಂದಾಗಿ ಪವಿತ್ರ ಗುಹೆ ಪ್ರದೇಶದ ಬಳಿ ಸಿಲುಕಿಕೊಂಡಿದ್ದ ಹೆಚ್ಚಿನ ಯಾತ್ರಿಗಳನ್ನು ಪಂಜತರ್ನಿಗೆ ಸ್ಥಳಾಂತರಿಸಲಾಗಿದೆ. ಇಂದು ಮುಂಜಾನೆ 3.38ರವರೆಗೆ ತೆರವು ಕಾರ್ಯ ಮುಂದುವರಿದಿತ್ತು. ಯಾವುದೇ ಯಾತ್ರಿ ಮಧ್ಯದಲ್ಲಿ ಸಿಲುಕಿಕೊಂಡಿಲ್ಲ, ಇದುವರೆಗೆ ಸುಮಾರು 15,000 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ" ಎಂದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ವಕ್ತಾರರು ತಿಳಿಸಿದ್ದಾರೆ.

ಪ್ರವಾಹದಲ್ಲಿ ತೀವ್ರವಾಗಿ ಗಾಯಗೊಂಡ ಒಂಬತ್ತು ರೋಗಿಗಳಿಗೆ ಅರೆಸೇನಾ ಪಡೆಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ಅವರನ್ನು ಕಡಿಮೆ ಎತ್ತರದ ನೀಲ್‌ಗ್ರಾತ್ ಬೇಸ್ ಕ್ಯಾಂಪ್‌ಗೆ ಸುರಕ್ಷಿತವಾಗಿ ಕರೆದೊಯ್ಯಲಾಗಿದೆ ಎಂದು ತಿಳಿಸಿದರು. 

ಪವಿತ್ರ ಗುಹೆಯಿಂದ ಬರುವ ಯಾತ್ರಾರ್ಥಿಗಳಿಗೆ ಸಹಾಯ ಮಾಡಲು ನೀಲ್‌ಗ್ರಾತ್ ಹೆಲಿಪ್ಯಾಡ್‌ನಲ್ಲಿ ಸಣ್ಣ ಬಿಎಸ್‌ಎಫ್ ತಂಡವನ್ನು ಸಹ ನಿಯೋಜಿಸಲಾಗಿದೆ. ನಿನ್ನೆ ರಾತ್ರಿ ಪಂಜತರ್ನಿಯಲ್ಲಿ ರಚಿಸಲಾದ ಬಿಎಸ್‌ಎಫ್ ಶಿಬಿರದಲ್ಲಿ ಸುಮಾರು 150 ಯಾತ್ರಿಗಳು ಉಳಿದುಕೊಂಡಿದ್ದಾರೆ. ಇಂದು  ಬೆಳಗ್ಗೆ 15 ರೋಗಿಗಳನ್ನು ಬಾಲ್ಟಾಲ್‌ಗೆ ವಿಮಾನದ ಮೂಲಕ ಕಳುಹಿಸಲಾಗಿದೆ ಎಂದರು.

ದಕ್ಷಿಣ ಕಾಶ್ಮೀರದಲ್ಲಿ ದೇಗುಲದ ಹೊರಗಿನ ಮೂಲ ಶಿಬಿರಕ್ಕೆ ಹಠಾತ್ ಪ್ರವಾಹ ಅಪ್ಪಳಿಸಿತು, 25 ಟೆಂಟ್‌ಗಳು ಮತ್ತು ಯಾತ್ರಾರ್ಥಿಗಳಿಗೆ ಆಹಾರ ನೀಡುವ ಮೂರು ಸಮುದಾಯ ಅಡುಗೆಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಪತ್ತೆಯಾದವರನ್ನು ಹುಡುಕಲು ಪರ್ವತ ರಕ್ಷಣಾ ತಂಡಗಳು ಮತ್ತು ಲುಕ್‌ಔಟ್ ಗಸ್ತು ತಿರುಗುತ್ತಿವೆ ಎಂದು ಸೇನಾ ಅಧಿಕಾರಿ ತಿಳಿಸಿದ್ದಾರೆ. ನಿನ್ನೆ ಸುಮಾರು 40 ಜನರು ಕಾಣೆಯಾಗಿದ್ದಾರೆ, ಐವರನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರಾಡಳಿತ ಪ್ರದೇಶ ಆಡಳಿತ ಮತ್ತು ಅಮರನಾಥ ದೇಗುಲ ಮಂಡಳಿ (ಎಸ್‌ಎಎಸ್‌ಬಿ) ಮೇಘಸ್ಫೋಟದಿಂದಾಗಿ ಹಾನಿಗೊಳಗಾದವರ ಕುಟುಂಬಗಳಿಗೆ ಸಹಾಯ ಮಾಡಲು ನಾಲ್ಕು ಸಹಾಯವಾಣಿಗಳನ್ನು ಆರಂಭಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com