ರಾಷ್ಟ್ರಪತಿ ಚುನಾವಣೆಯಲ್ಲೂ 'ಆಪರೇಷನ್ ಕಮಲ': ಬಿಜೆಪಿ ಹಣಬಲದ ಆಟವಾಡುತ್ತಿದೆ ಎಂದ ಯಶವಂತ್ ಸಿನ್ಹಾ
ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಚುನಾವಣೆಯಲ್ಲೂ ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ) ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂದು ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರು ಗುರುವಾರ...
Published: 14th July 2022 07:23 PM | Last Updated: 14th July 2022 07:40 PM | A+A A-

ಯಶ್ವಂತ್ ಸಿನ್ಹಾ
ಭೋಪಾಲ್: ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಚುನಾವಣೆಯಲ್ಲೂ ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ) ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂದು ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರು ಗುರುವಾರ ಆರೋಪಿಸಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಕೇಸರಿ ಪಕ್ಷ 'ಆಪರೇಷನ್ ಕಮಲ' ನಡೆಸುತ್ತಿದೆ ಎಂದು ಆರೋಪಿಸಿದ ಸಿನ್ಹಾ, "ಬಿಜೆಪಿಯೇತರ ಶಾಸಕರಿಗೆ ದೊಡ್ಡ ಮೊತ್ತದ ಹಣ" ನೀಡಲಾಗುತ್ತಿದೆ. ಈ ಮೂಲಕ ತನ್ನ ರಾಷ್ಟ್ರಪತಿ ಅಭ್ಯರ್ಥಿಯ ಗೆಲುವನ್ನು ಖಚಿತಪಡಿಸಿಕೊಳ್ಳುತ್ತಿದೆ ಎಂದು ದೂರಿದ್ದಾರೆ.
ಇಂದು ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿನ್ಹಾ, "ಇಂದು ಬೆಳಗ್ಗೆ ಮಧ್ಯಪ್ರದೇಶದ ಪ್ರಮುಖ ಪತ್ರಿಕೆಯಲ್ಲಿ 'ಬಿಜೆಪಿ ಕಾಂಗ್ರೆಸ್‌ನ 26 ಬುಡಕಟ್ಟು ಶಾಸಕರ ಮೇಲೆ ಕಣ್ಣಿಟ್ಟಿದೆ, ಅಡ್ಡ ಮತದಾನಕ್ಕೆ ಸಿದ್ಧತೆ' ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾದ ಸುದ್ದಿಯನ್ನು ನಾನು ತೀವ್ರ ಸಂಕಟದಿಂದ ಓದಿದ್ದೇನೆ ಎಂದರು.
ಇದನ್ನು ಓದಿ: 53 ವರ್ಷಗಳ ಸಂಪ್ರದಾಯ: ರಾಷ್ಟ್ರಪತಿಗಳ ಚುನಾವಣೆಗಾಗಿ "ಮಿಸ್ಟರ್ ಬ್ಯಾಲಟ್ ಬಾಕ್ಸ್" ವಿಮಾನದಲ್ಲಿ ಪ್ರಯಾಣ!
ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಲು ಬಿಜೆಪಿಯೇತರ ಶಾಸಕರಿಗೆ ಭಾರಿ ಮೊತ್ತದ ಹಣದ ಆಮಿಷ ಒಡ್ಡಲಾಗುತ್ತಿದೆ ಎಂಬ ಮಾಹಿತಿಯೂ ನಂಬಲರ್ಹ ಮೂಲಗಳಿಂದ ಬಂದಿದೆ ಎಂದು ಸಿನ್ಹಾ ಹೇಳಿದ್ದಾರೆ.
ಕಮಲ ಬಿಜೆಪಿಯ ಚುನಾವಣಾ ಚಿಹ್ನೆಯಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯು ತನ್ನ ಆಡಳಿತವಿಲ್ಲದ ರಾಜ್ಯಗಳಲ್ಲಿ ಅಧಿಕಾರ ಪಡೆಯಲು ಆಪರೇಷನ್ ಕಮಲ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.