ಕಲ್ಲಕುರಿಚಿ ವಿದ್ಯಾರ್ಥಿನಿ ಸಾವು: 2 ಶಿಕ್ಷಕರ ಬಂಧನ, ತನಿಖೆ ಜವಾಬ್ದಾರಿ ಸಿಬಿಸಿಐಡಿಗೆ, ಮರಣೋತ್ತರ ಪರೀಕ್ಷೆಗೆ ಮದ್ರಾಸ್ ಹೈಕೋರ್ಟ್ ಆದೇಶ!

ವಿದ್ಯಾರ್ಥಿನಿಯೊಬ್ಬಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಕಲ್ಲಕುರಿಚಿಯಲ್ಲಿ ಸಂಭವಿಸಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಪೊಲೀಸರು ಮತ್ತಿಬ್ಬರು ಶಿಕ್ಷಕರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಕಲ್ಲಕುರಿಚಿ ವಿದ್ಯಾರ್ಥಿನಿ ಸಾವು ಪ್ರಕರಣ
ಕಲ್ಲಕುರಿಚಿ ವಿದ್ಯಾರ್ಥಿನಿ ಸಾವು ಪ್ರಕರಣ

ಚೆನ್ನೈ: ವಿದ್ಯಾರ್ಥಿನಿಯೊಬ್ಬಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಕಲ್ಲಕುರಿಚಿಯಲ್ಲಿ ಸಂಭವಿಸಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಪೊಲೀಸರು ಮತ್ತಿಬ್ಬರು ಶಿಕ್ಷಕರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಇಲ್ಲಿನ ಶಾಲೆಯೊಂದರ ಇಬ್ಬರು ಶಿಕ್ಷಕರನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಅಲ್ಲದೆ, ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಮತ್ತು ಜುಲೈ 17 ರಂದು ಶಾಲೆಯನ್ನು ಧ್ವಂಸಗೊಳಿಸಿದ್ದಕ್ಕಾಗಿ ಸುಮಾರು 300 ಜನರನ್ನು ಬಂಧಿಸಲಾಗಿದೆ ಮತ್ತು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ತನಿಖೆ ಜವಾಬ್ದಾರಿ ಸಿಬಿಸಿಐಡಿಗೆ!
ಈ ಮಧ್ಯೆ ಸರ್ಕಾರವು ಪ್ರಕರಣವನ್ನು ಸಿಬಿಸಿಐಡಿಗೆ ವಹಿಸಿರುವುದಾಗಿ ವರದಿಗಳಾಗಿವೆ. ಪ್ರಕರಣ ಹಿಂಸಾರೂಪ ಪಡೆಯುತ್ತಿದ್ದಂತೆಯೇ ಎಚ್ಚೆತ್ತ ತಮಿಳುನಾಡು ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣದ ತನಿಖೆಯನ್ನು ಸಿಬಿಸಿಐಡಿಗೆ ವಹಿಸಿದೆ ಎನ್ನಲಾಗಿದೆ. 

ಇನ್ನು ವಿದ್ಯಾರ್ಥಿನಿ ಸಾವಿನ ಹಿನ್ನೆಲೆಯಲ್ಲಿ ಹಿಂಸಾಚಾರ ನಡೆಸಿದ ಕಾರಣಕ್ಕೆ ಭಾನುವಾರ 70 ಜನರನ್ನು ಬಂಧಿಸಲಾಗಿತ್ತು. ವಿದ್ಯಾರ್ಥಿನಿ ಸಾವಿಗೆ ಸಂಬಂಧಿಸಿದಂತೆ ಶಾಲಾ ಆಡಳಿತದ ಮೂವರನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ಇಬ್ಬರು ಶಿಕ್ಷರರನ್ನು ಬಂಧಿಸಲಾಗಿದ್ದು, ಬಂಧಿತ ಶಿಕ್ಷಕರನ್ನು ಪಿ ಹರಿಪ್ರಿಯಾ (40) ಮತ್ತು ಜೆ ಕೃತಿಕಾ (28) ಎಂದು ಗುರುತಿಸಲಾಗಿದೆ. ಇಬ್ಬರು ಮೃತ ವಿದ್ಯಾರ್ಥಿನಿ ವ್ಯಾಸಂಗ ಮಾಡುತ್ತಿದ್ದ ಸಂಸ್ಥೆಯ ಶಿಕ್ಷಕರು ಎನ್ನಲಾಗಿದೆ.

ಏನಿದು ಘಟನೆ?
ತಮಿಳುನಾಡಿನ ಕಲ್ಲಕುರಿಚಿಯಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಚಿನ್ನಸೇಲಂನ ಕಣಿಯಮೂರ್ ಪ್ರದೇಶದ ಖಾಸಗಿ ವಸತಿ ಶಾಲೆಯಲ್ಲಿ 12 ನೇ ತರಗತಿ ಓದುತ್ತಿದ್ದ ಕಡಲೂರು ಜಿಲ್ಲೆಯ ಪೆರಿಯನೆಸಲೂರು ಗ್ರಾಮದ ನಿವಾಸಿ 17 ವರ್ಷದ ವಿದ್ಯಾರ್ಥಿನಿ ಜುಲೈ 13 ರಂದು ಹಾಸ್ಟೆಲ್ ಆವರಣದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಮೃತದೇಹದ ಬಳಿ ಆತ್ಮಹತ್ಯೆ ಪತ್ರ ಪತ್ತೆಯಾಗಿದ್ದು, ಇಬ್ಬರು ಶಿಕ್ಷಕರು ತನಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಮೃತಳು ಆರೋಪಿಸಿದ್ದಾಳೆ. ಹಾಸ್ಟೆಲ್‌ನ ಮೂರನೇ ಮಹಡಿಯ ಕೊಠಡಿಯೊಂದರಲ್ಲಿದ್ದ ವಿದ್ಯಾರ್ಥಿನಿ ಮೇಲಿನ ಮಹಡಿಯಿಂದ ನೆಲಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಂಕಿಸಲಾಗಿದೆ. ಆದರೆ, ಸಾವಿಗೂ ಮೊದಲೇ ಆಕೆಗೆ ಗಾಯಗಳಾಗಿವೆ ಎಂದು ಮರಣೋತ್ತರ ಪರೀಕ್ಷೆಯ ವರದಿಯು ಹೇಳಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಅಧ್ಯಯನದ ವಿಚಾರವಾಗಿ ತಮ್ಮ ಮಗಳಿಗೆ ಶಿಕ್ಷಕರು ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಗಣಿತ ಮತ್ತು ರಸಾಯನಶಾಸ್ತ್ರ ಬೋಧಿಸುವ ಇಬ್ಬರು ಶಿಕ್ಷಕರ ವಿರುದ್ಧ ಮೃತ ವಿದ್ಯಾರ್ಥಿನಿಯ ಕುಟುಂಬಸ್ಥರು ಪ್ರತಿಭಟನೆ ಮಾಡಿದ್ದಾರೆ. ಸಾವಿಗೆ ಸಂಬಂಧಿಸಿದಂತೆ ಹಲವು ಅನುಮಾನಗಳಿವೆ ಎಂದು ಆರೋಪಿಸಿರುವ ವಿದ್ಯಾರ್ಥಿನಿಯ ಪೋಷಕರು ಮತ್ತು ಸಂಬಂಧಿಕರು ನ್ಯಾಯಕ್ಕಾಗಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.

ವ್ಯಾಪಕ ಹಿಂಸಾಚಾರ, ಬಸ್ ಗೆ ಬೆಂಕಿ
ಇನ್ನು ವಿದ್ಯಾರ್ಥಿನಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರು, ಸಂಬಂಧಿಕರ ಜೊತೆ ಹಲವು ವಿದ್ಯಾರ್ಥಿ ಸಂಘಟನೆಗಳು ನಿನ್ನೆ ವ್ಯಾಪಕ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಹಲವರು ಗಾಯಗೊಂಡಿದ್ದರು. ಅಲ್ಲದೆ ಶಿಕ್ಷಣ ಸಂಸ್ಥೆಯ ವಾಹನಕ್ಕೆ ಉದ್ರಿಕ್ತರ ಗುಂಪು ಬೆಂಕಿ  ಹಾಕಿ ಹಲವು ವಾಹನಗಳನ್ನು ಜಖಂ ಮಾಡಿದ್ದರು. ಅಲ್ಲದೆ ಶಾಲಾ ಆವರಣದ ಬಳಿ ನಿಲ್ಲಿಸಿದ್ದ ಪೊಲೀಸ್ ಬಸ್‌ಗೂ ಉದ್ರಿಕ್ತರು ಬೆಂಕಿ ಹಚ್ಚಿದ್ದರು. 

ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಮುನ್ನೂರಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದು, ಇನ್ನೂ ವಿಚಾರಣೆ ನಡೆಸುತ್ತಿದ್ದಾರೆ. ಗಲಭೆಕೋರರನ್ನು ಬಂಧಿಸಲು ಹತ್ತು ತಂಡಗಳನ್ನು ರಚಿಸಲಾಗಿದೆ. ಪ್ರಸ್ತುತ ಘಟನಾ ಪ್ರದೇಶದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ಕಲ್ಲಕುರಿಚಿ ಬಸ್ ನಿಲ್ದಾಣ ಸೋಮವಾರ ನಿರ್ಜನವಾಗಿ ಕಾಣುತ್ತಿತ್ತು.

ಮರು ಮರಣೋತ್ತರ ಪರೀಕ್ಷೆಗೆ ಮದ್ರಾಸ್ ಹೈಕೋರ್ಟ್ ಆದೇಶ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎನ್ ಸತೀಶ್ ಕುಮಾರ್ ಅವರು ಭಾನುವಾರ ಹಿಂಸಾಚಾರದಲ್ಲಿ ತೊಡಗಿರುವವರನ್ನು ಗುರುತಿಸಲು ವಿಶೇಷ ತಂಡಗಳನ್ನು ರಚಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದ್ದಾರೆ. ಪ್ರಕರಣದಲ್ಲಿ ಹೊಸದಾಗಿ ಶವಪರೀಕ್ಷೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com