ಸಣ್ಣ ಅಂಗಡಿಗಳ ಸರಕು ಸಾಮಾಗ್ರಿಗಳ ಮೇಲೆ ಜಿಎಸ್‌ಟಿ ಹೇರುವುದಿಲ್ಲ: ಕೇರಳ ಸರ್ಕಾರ
ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್ ಟಿ ಹೇರಿಕೆ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಕೇರಳ ಸರ್ಕಾರ ಸಣ್ಣ ಅಂಗಡಿಗಳ ಸರಕು ಸಾಮಾಗ್ರಿಗಳ ಮೇಲೆ ಜಿಎಸ್‌ಟಿ ಹೇರುವುದಿಲ್ಲ ಎಂದು ಘೋಷಣೆ ಮಾಡಿದೆ.
Published: 20th July 2022 12:39 PM | Last Updated: 20th July 2022 12:39 PM | A+A A-

ಸಂಗ್ರಹ ಚಿತ್ರ
ತಿರುವನಂತಪುರ: ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್ ಟಿ ಹೇರಿಕೆ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಕೇರಳ ಸರ್ಕಾರ ಸಣ್ಣ ಅಂಗಡಿಗಳ ಸರಕು ಸಾಮಾಗ್ರಿಗಳ ಮೇಲೆ ಜಿಎಸ್‌ಟಿ ಹೇರುವುದಿಲ್ಲ ಎಂದು ಘೋಷಣೆ ಮಾಡಿದೆ.
ಸಣ್ಣಪುಟ್ಟ ಅಂಗಡಿಗಳಲ್ಲಿ ಮಾರಾಟ ಮಾಡುವ ದಿನಬಳಕೆಯ ಮತ್ತು ಸರಕು ವಸ್ತುಗಳಿಗೆ ರಾಜ್ಯದಲ್ಲಿ ಯಾವುದೇ ರೀತಿಯ ಜಿಎಸ್‌ಟಿ ವಿಧಿಸುವುದಿಲ್ಲ ಎಂದು ಕೇರಳದ ಹಣಕಾಸು ಸಚಿವ ಕೆ. ಎನ್. ಬಾಲಗೋಪಾಲ ಅವರು ವಿಧಾನಸಭೆಯಲ್ಲಿ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಹಾಲಿನ ಉತ್ಪನ್ನಗಳ ಮೇಲೆ ಜಿಎಸ್ ಟಿ; ಪ್ರಧಾನಿ ಮೋದಿ ಹಳೇ ವಿಡಿಯೋ ವೈರಲ್ ಬೆನ್ನಲ್ಲೇ ಬಿಜೆಪಿ ಸ್ಪಷ್ಟನೆ!!
ಸಣ್ಣ ಅಂಗಡಿಗಳಲ್ಲಿ 1–2 ಕೆಜಿ ಪ್ಯಾಕ್‌ಗಳಲ್ಲಿ ಚಿಲ್ಲರೆಯಾಗಿ ಮಾರಾಟ ಮಾಡುವ ದಿನಬಳಕೆಯ ವಸ್ತು, ದಿನಸಿ, ಇತರ ಸರಕು ಸಾಮಾಗ್ರಿಗಳಿಗೆ ಕೇರಳ ಸರ್ಕಾರ ಜಿಎಸ್‌ಟಿ ವಿಧಿಸುವುದಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಜತೆ ಜಟಾಪಟಿ ನಡೆಯಬಹುದು. ಆದರೂ, ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.
ಕೇರಳ ಸರ್ಕಾರದ ನಿರ್ಧಾರದ ಕುರಿತು ಕೇಂದ್ರಕ್ಕೆ ಈಗಾಗಲೇ ಪತ್ರ ಬರೆಯಲಾಗಿದ್ದು, ಸಣ್ಣ ಅಂಗಡಿಗಳು, ಮಾರಾಟಗಾರರು ಮತ್ತು ಜನಸಾಮಾನ್ಯರಿಗೆ ಅನುಕೂಲವಾಗಲಿ ಮತ್ತು ಹೆಚ್ಚಿನ ತೆರಿಗೆ ಹೊರೆ ಬೀಳದಿರಲಿ ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಕೇಂದ್ರದ ಜತೆ ಸಂಘರ್ಷ ಏರ್ಪಡಬಹುದು. ಆದರೆ ಮುಖ್ಯಮಂತ್ರಿ ಈ ಬಗ್ಗೆ ಕೇಂದ್ರಕ್ಕೆ ತಿಳಿಸಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ದೇಶದಲ್ಲಿ ಜಿಎಸ್‌ಟಿ ಪರಿಷ್ಕರಣೆ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಕೇರಳ ಸರ್ಕಾರದ ಈ ನಿರ್ಧಾರ ಗಮನ ಸೆಳೆದಿದೆ.