ಲೋಕಸಭೆ ಕಲಾಪಕ್ಕೆ ಅಡ್ಡಿ: ನಾಲ್ವರು ಕಾಂಗ್ರೆಸ್ ಸಂಸದರು ಅಮಾನತು
ಬೆಲೆ ಏರಿಕೆ ಖಂಡಿಸಿ ಸದನದೊಳಗೆ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸುವ ಮೂಲಕ ಕಲಾಪಕ್ಕೆ ಅಡ್ಡಿಪಡಿಸಿದ ನಾಲ್ವರು ಕಾಂಗ್ರೆಸ್ ಸಂಸದರನ್ನು ಲೋಕಸಭೆಯಿಂದ ಇಡೀ ಅಧಿವೇಶನದ ಅವಧಿಗೆ ಅಮಾನತು ಮಾಡಲಾಗಿದೆ.
Published: 25th July 2022 04:56 PM | Last Updated: 25th July 2022 04:56 PM | A+A A-

ಅಮಾನತುಗೊಂಡ ಸಂಸದರು
ನವದೆಹಲಿ: ಬೆಲೆ ಏರಿಕೆ ಖಂಡಿಸಿ ಸದನದೊಳಗೆ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸುವ ಮೂಲಕ ಕಲಾಪಕ್ಕೆ ಅಡ್ಡಿಪಡಿಸಿದ ನಾಲ್ವರು ಕಾಂಗ್ರೆಸ್ ಸಂಸದರನ್ನು ಲೋಕಸಭೆಯಿಂದ ಇಡೀ ಅಧಿವೇಶನದ ಅವಧಿಗೆ ಅಮಾನತು ಮಾಡಲಾಗಿದೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸದಸ್ಯರಿಗೆ, ಪ್ರತಿಭಟನೆ ನಡೆಸಲು ಬಯಸಿದರೆ ಸದನದ ಹೊರಗೆ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸುವಂತೆ ಸೂಚಿಸಿದರು. ಆದರೂ ಸದನದಲ್ಲೇ ನಿರಂತರ ಪ್ರತಿಭಟನೆ ನಡೆಸಿದ್ದರಿಂದ ಆಕ್ರೋಶಗೊಂಡ ಸ್ಪೀಕರ್, ನಾಲ್ವರು ಕಾಂಗ್ರೆಸ್ ಸಂಸದರು ಇಡೀ ಅಧಿವೇಶನದಲ್ಲಿ ಭಾಗಿಯಾಗದಂತೆ ಅಮಾನತು ಮಾಡಿದರು.
ಇದನ್ನು ಓದಿ: ರಾಷ್ಟ್ರೀಯ ಭದ್ರತೆ, ಯುವಕರ ಭವಿಷ್ಯಕ್ಕೆ ಅಗ್ನಿವೀರ್ ಯೋಜನೆ ಅಪಾಯಕಾರಿ: ರಾಹುಲ್ ಗಾಂಧಿ
ಅಮಾನತುಗೊಂಡಿರುವ ಕಾಂಗ್ರೆಸ್ ಸಂಸದರೆಂದರೆ ಮಾಣಿಕಂ ಟ್ಯಾಗೋರ್, ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಟಿಎನ್ ಪ್ರತಾಪನ್.
ಸ್ಪೀಕರ್ ಕ್ರಮದ ನಂತರ ನಾಲ್ವರು ಸಂಸದರು ಸಂಸತ್ ಮೈದಾನದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ತೆರಳಿ ಘೋಷಣೆಗಳನ್ನು ಕೂಗಿದರು. ಕೆಲವರನ್ನು ಅಮಾನತು ಮಾಡುವ ಮೂಲಕ ಸರ್ಕಾರ ತನ್ನ ಸಂಸದರನ್ನು ಬೆದರಿಸಲು ಪ್ರಯತ್ನಿಸುತ್ತಿದೆ. ಆದರೆ ನಮ್ಮ ಸಂಸದರು ಜನರಿಗೆ ಮುಖ್ಯವಾದ ಸಮಸ್ಯೆಗಳನ್ನು ಎತ್ತಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಮಧ್ಯಾಹ್ನ 3 ಗಂಟೆಯ ನಂತರ ಅಧಿವೇಶನ ಪುನರಾರಂಭಗೊಂಡಾಗ ವಿರೋಧ ಪಕ್ಷದ ಸಂಸದರು ಭಿತ್ತಿಪತ್ರಗಳೊಂದಿಗೆ ಮರಳಿ ಪ್ರತಿಭಟನೆ ನಡೆಸಿದರು.
ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಪ್ರತಿಪಕ್ಷಗಳ ಸಂಸದರ ವರ್ತನೆಯನ್ನು ಖಂಡಿಸಿದರು. ಕಲಾಪ ಸುಗಮವಾಗಿ ನಡೆಯಲು ಮತ್ತೊಮ್ಮೆ ಸದನದೊಳಗೆ ಫಲಕಗಳನ್ನು ತಂದ ಸಂಸದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್‌ಗೆ ಮನವಿ ಮಾಡಿದರು.
ಭಿತ್ತಿಪತ್ರಗಳು ಮತ್ತು ಬ್ಯಾನರ್‌ಗಳನ್ನು ಹಿಡಿದು ಪ್ರತಿಭಟಿಸಿದ ವಿರೋಧ ಪಕ್ಷದ ಸಂಸದರು, ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿಗೆ ಬಂದು ಹೆಚ್ಚುತ್ತಿರುವ ಹಣದುಬ್ಬರ ಮತ್ತು ಸರಕು ಮತ್ತು ಸೇವಾ ತೆರಿಗೆ ಅಥವಾ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಹೆಚ್ಚಳದ ಬಗ್ಗೆ ತಮ್ಮ ಕಳವಳವನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು.
“ನೀವು ಫಲಕಗಳನ್ನು ತೋರಿಸಲು ಬಯಸಿದರೆ, ಅದನ್ನು ಸದನದ ಹೊರಗೆ ಮಾಡಿ. ನಾನು ಚರ್ಚೆಗೆ ಸಿದ್ಧನಿದ್ದೇನೆ, ಆದರೆ ನನ್ನ ಹೃದಯವಂತಿಕೆಯನ್ನು ದೌರ್ಬಲ್ಯ ಎಂದು ಭಾವಿಸಬೇಡಿ” ಎಂದು ಸ್ಪೀಕರ್ ಹೇಳಿದರು. ಬಳಿಕ ಕಲಾಪವನ್ನು ನಾಳೆಗೆ ಮುಂದೂಡಿದರು.