'ರಾಷ್ಟ್ರಪತಿಯಾಗಿ ನನ್ನನ್ನು ಆಯ್ಕೆ ಭಾರತದಲ್ಲಿ ಬಡವರು ತಮ್ಮ ಕನಸುಗಳನ್ನು ಸಾಕಾರಗೊಳಿಸಬಹುದು ಎಂಬುದನ್ನು ಸಾಬೀತುಪಡಿಸುತ್ತದೆ': ದ್ರೌಪದಿ ಮುರ್ಮು

ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ತಾನು ಆಯ್ಕೆಯಾಗಿರುವುದು ತನ್ನ ವೈಯಕ್ತಿಕ ಸಾಧನೆಯಲ್ಲ ಬದಲಾಗಿ ಭಾರತದ ಪ್ರತಿಯೊಬ್ಬ ಬಡವರ ಸಾಧನೆ ಎಂದು ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಹೇಳಿದ್ದಾರೆ.
ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಿರ್ಗಮಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು
ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಿರ್ಗಮಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು

ನವದೆಹಲಿ: ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ತಾನು ಆಯ್ಕೆಯಾಗಿರುವುದು ತನ್ನ ವೈಯಕ್ತಿಕ ಸಾಧನೆಯಲ್ಲ ಬದಲಾಗಿ ಭಾರತದ ಪ್ರತಿಯೊಬ್ಬ ಬಡವರ ಸಾಧನೆ ಎಂದು ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಹೇಳಿದ್ದಾರೆ, ಅಂದರೆ ಬಡವ ಕನಸು ಕಾಣುವುದು ಮಾತ್ರವಲ್ಲ, ಕನಸು, ಆಶೋತ್ತರಗಳನ್ನು ಈಡೇರಿಸಿಕೊಳ್ಳಬಹುದು ಎನ್ನುವ ಅರ್ಥದಲ್ಲಿ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾತನಾಡಿದ್ದಾರೆ. 

ಭಾರತದ 15 ನೇ ರಾಷ್ಟ್ರಪತಿಯಾಗಿ ಇಂದು ದೆಹಲಿಯ ಸಂಸತ್ತು ಭವನದಲ್ಲಿ ನಡೆದ ಸರಳ ಸಾಂಪ್ರದಾಯಿಕ ಸಮಾರಂಭದಲ್ಲಿ ಮಾತನಾಡಿದ 64 ವರ್ಷದ ಮುರ್ಮು ಅವರು, ದೇಶದ ನಿರ್ಗತಿಕರು, ಬಡವರು, ವಂಚಿತರು, ದೀನ ದಲಿತರು ಮತ್ತು ಬುಡಕಟ್ಟು ಜನರು ತಮ್ಮ ಪ್ರತಿಬಿಂಬವನ್ನು ನನ್ನಲ್ಲಿ ನೋಡಬಹುದು, ಇದುವೇ ನನಗೆ ಅತಿ ದೊಡ್ಡ ಸಂತೃಪ್ತಿಯ ವಿಷಯವಾಗಿದೆ ಎಂದರು. 

ಭಾಷಣ ಮಧ್ಯೆ ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಿದರು. ಸ್ವಾತಂತ್ರ್ಯ ಹೋರಾಟಗಾರರ  ನಿರೀಕ್ಷೆಗಳನ್ನು ಪೂರೈಸಲು ದೇಶವು "ಸಬ್ಕಾ ಪ್ರಯಾಸ್" (ಎಲ್ಲರ ಪ್ರಯತ್ನ) ಮತ್ತು "ಸಬ್ಕಾ ಕರ್ತವ್ಯ (ಎಲ್ಲರ ಕರ್ತವ್ಯ) ದ ಅವಳಿ ಮಾರ್ಗಗಳಲ್ಲಿ ತ್ವರಿತವಾಗಿ ಮುನ್ನಡೆಯಬೇಕಾಗುತ್ತದೆ ಎಂದು ಹೇಳಿದರು.

ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಾಗಿರುವಾಗ ಅದನ್ನು ಭಾಷಣದಲ್ಲಿ ಪ್ರಸ್ತಾಪಿಸಿ ಮಾತನಾಡಿ, ದೇಶವು ಈ ವರ್ಷ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವ "ಆಜಾದಿ ಕಾ ಅಮೃತ್ ಮಹೋತ್ಸವ"ವನ್ನು ಆಚರಿಸುತ್ತಿರುವ ಸಮಯದಲ್ಲಿ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವುದು ನನ್ನ ಸುದೈವ ಎಂದರು.

ಭಾರತದ ಮೊದಲ ಬುಡಕಟ್ಟು ಜನಾಂಗದ ರಾಷ್ಟ್ರಪತಿಯಾಗಿರುವ ಮುರ್ಮು ಅವರು ಒಡಿಶಾದ ಒಂದು ಸಣ್ಣ ಬುಡಕಟ್ಟು ಹಳ್ಳಿಯಲ್ಲಿ ಬೆಳೆದರು, ಅಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆಯುವುದು ಕನಸಿನಂತಿತ್ತು, ಆ ಸಮಯದಲ್ಲಿ ಕಾಲೇಜು ಶಿಕ್ಷಣಕ್ಕೆ ದಾಖಲಾದ ಹಳ್ಳಿಯ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ನಾನು ಪಾತ್ರಳಾಗಿದ್ದೆ ಎಂದು ನೆನಪಿಸಿಕೊಂಡರು.

ಇದು ಭಾರತದ ಪ್ರಜಾಪ್ರಭುತ್ವದ ಶಕ್ತಿಗೆ ಸಂದ ಗೌರವವಾಗಿದೆ, ಪ್ರಗತಿಪರ ದೇಶವನ್ನು ಮುನ್ನಡೆಸುತ್ತಿರುವುದಕ್ಕೆ ಹೆಮ್ಮೆಯಿದೆ. ಭಾರತೀಯರಿಗೆ, ವಿಶೇಷವಾಗಿ ಯುವಕರು ಮತ್ತು ಮಹಿಳೆಯರಿಗೆ ಭರವಸೆಯ ಬೆಳಕಾಗಲು ಬಯಸುತ್ತೇನೆ, ಅವರ ಹಿತಾಸಕ್ತಿಯು ರಾಷ್ಟ್ರಪತಿಯಾಗಿ ತನಗೆ ಶ್ರೇಷ್ಠವಾಗಿರುತ್ತದೆ ಎಂದರು. 

ದೇಶವು ಈಗ "ಏಕ್ ಭಾರತ್, ಶ್ರೇಷ್ಠ ಭಾರತ" (ಒಂದು ಭಾರತ, ಶ್ರೇಷ್ಠ ಭಾರತ) ನಿರ್ಮಾಣದಲ್ಲಿ ನಿರತವಾಗಿದೆ, ಅದರ ಅಭಿವೃದ್ಧಿ ಕಾರ್ಯಸೂಚಿಗಾಗಿ ಸರ್ಕಾರದ ಪ್ರಮುಖ ಘೋಷಣೆಗಳಲ್ಲಿ ಒಂದನ್ನು ಉಲ್ಲೇಖಿಸಿ ಮಾತನಾಡಿದರು. ಭಾರತವು ಈಗ ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿಯ ಹೊಸ ಅಧ್ಯಾಯವನ್ನು ಬರೆಯುತ್ತಿದೆ. COVID-19 ಸಾಂಕ್ರಾಮಿಕ ರೋಗವನ್ನು ನಿರ್ವಹಿಸಿದ ರೀತಿ ದೇಶದ ನಾಗರಿಕರಿಗೆ 200 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ವಿತರಿಸಿದ ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಶ್ಲಾಘಿಸಿದರು. 

ಕೇಂದ್ರ ಸರ್ಕಾರದ ಸ್ಥಳೀಯತೆಗೆ ಆದ್ಯತೆ, ಡಿಜಿಟಲ್ ಇಂಡಿಯಾ ಅಭಿಯಾನಗಳನ್ನು ಕೊಂಡಾಡಿದರು.

ದೇಶಕ್ಕೆ ಪರ್ವಕಾಲ ಎಂದ ಪ್ರಧಾನಿ: ಇಂದು 15ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿ ಇತಿಹಾಸ ನಿರ್ಮಿಸಿದ ಗಳಿಗೆಯನ್ನು ದೇಶಕ್ಕೆ ಒಂದು ಪರ್ವಕಾಲ, ವಿಶೇಷವಾಗಿ ಬಡವರು, ನಿರ್ಗತಿಕರು ಮತ್ತು ತುಳಿತಕ್ಕೊಳಗಾದ ಸಮುದಾಯದವರಿಗೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. 

ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಇಡೀ ದೇಶ ಹೆಮ್ಮೆಯಿಂದ ನೋಡಿದೆ, ಅವರ ಅಧಿಕಾರಾವಧಿ ಸುಗಮವಾಗಿ ಸಾಗಲಿ ಎಂದು ಆಶಿಸಿದ್ದಾರೆ. 

ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾಡಿದ ಭಾಷಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭರವಸೆ ಮತ್ತು ಸಹಾನುಭೂತಿಯ ಸಂದೇಶವನ್ನು ನೀಡಿದ್ದಾರೆ. ಅವರು ಭಾರತದ ಸಾಧನೆಗಳ ಮೇಲೆ ಒತ್ತು ನೀಡಿದರು. ಭಾರತವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ ಮುಂದಿನ ಹಾದಿಯ ಭವಿಷ್ಯದ ದೃಷ್ಟಿಕೋನವನ್ನು ಪ್ರಸ್ತುತಪಡಿಸಿದ್ದಾರೆ ಎಂದು ಪ್ರಧಾನಿ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com