ಸುಗ್ರೀವಾಜ್ಞೆ, ತುರ್ತುಪರಿಸ್ಥಿತಿಯ ಘೋಷಣೆ, ಇನ್ನೂ ಹಲವು... ಹೀಗಿದೆ ರಾಷ್ಟ್ರಪತಿಗಳ ಅಧಿಕಾರ ವ್ಯಾಪ್ತಿಯ ಹರವು...

ದೇಶದ 15 ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಜು.25 ರಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. 
ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ: ದೇಶದ 15 ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಜು.25 ರಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿಗಳಿಗೆ ಇರುವ ವಿಶೇಷ ಅಧಿಕಾರಗಳೇನು ಎಂಬುದನ್ನು ವಿವರಿಸಲಿದೆ ಈ ಲೇಖನ 

ಸಾಂವಿಧಾನಿಕ ಮುಖ್ಯಸ್ಥರಾಗಿ, ರಾಷ್ಟ್ರಪತಿಗಳು ಸಂವಿಧಾನದ ಪಾಲಕ, ರಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುವ ರಾಷ್ಟ್ರಪತಿಗಳಿಗೆ ಸಂಸತ್ ಅಧಿವೇಶನವನ್ನು ಕರೆಯುವುದು, ಸುಗ್ರೀವಾಜ್ಞೆಗಳನ್ನು ಪ್ರಕಟಿಸುವುದು, ಕ್ಷಮಾದಾನ ನೀಡುವುದು, ಪ್ರಧಾನಿ ನೇತೃತ್ವದ ಕೇಂದ್ರ ಮಂತ್ರಿ ಪರಿಷತ್ ಸಲಹೆಯ ಮೇರೆಗೆ ರಾಜ್ಯ ಅಥವಾ ದೇಶದಲ್ಲಿ ತುರ್ತು ಪರಿಸ್ಥಿತಿಯ ಘೋಷಣೆಗೆ ಸಹಿ ಮಾಡುವ ಅಧಿಕಾರವನ್ನೂ ರಾಷ್ಟ್ರಪತಿಗಳು ಹೊಂದಿದ್ದಾರೆ. 

ಮುರ್ಮು ಅವರನ್ನು ಸಂಸತ್ ಹಾಗೂ ವಿಧಾನಸಭೆಗಳ ಚುನಾಯಿತ ಪ್ರತಿನಿಧಿಗಳ ಮತದಾನದ ಮೂಲಕ ಆಯ್ಕೆ ಮಾಡಲಾಗಿತ್ತು. ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುವ ಪ್ರತಿ ಚುನಾಯಿತ ಸದಸ್ಯನ ಕ್ಷೇತ್ರದ ಜನಸಂಖ್ಯೆಯ ಆಧಾರದಲ್ಲಿ ಆತನ ಮತ ಮೌಲ್ಯ ನಿಗದಿಯಾಗಿರಲಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಧಿಕಾರಾವಧಿ 2027 ರ ಜುಲೈ 24 ವರೆಗೂ ಇರಲಿದೆ.

ರಾಷ್ಟ್ರಪತಿ ಸ್ಥಾನದಲ್ಲಿ ಈಗಾಗಲೇ ಇರುವವರು ಪುನರಾಯ್ಕೆಗೊಳ್ಳುವುದಕ್ಕೂ ಅವಕಾಶವಿದೆ. ಆದರೆ ಈ ವರೆಗೂ ರಾಜೇಂದ್ರ ಪ್ರಸಾದ್ ಮಾತ್ರ ಎರಡು ಬಾರಿ ಆಯ್ಕೆಯಾಗಿರುವ ಏಕೈಕ ರಾಷ್ಟ್ರಪತಿಯಾಗಿದ್ದಾರೆ.

ರಾಷ್ಟ್ರಪತಿಗಳನ್ನು ವಜಾಗೊಳಿಸುವುದಕ್ಕೆ ಸಂವಿಧಾನದ ಆರ್ಟಿಕಲ್ 61 ರ ಪ್ರಕ್ರಿಯೆಗಳನ್ನು ಪಾಲಿಸಬೇಕಾಗುತ್ತದೆ. ಇನ್ನು ರಾಷ್ಟ್ರಪತಿಗಳು ತಾವಾಗಿಯೇ ಸ್ವತಃ ರಾಜೀನಾಮೆ ನೀಡಲು ಬಯಸಿದರೆ, ರಾಜೀನಾಮೆ ಪತ್ರವನ್ನು ಉಪರಾಷ್ಟ್ರಪತಿಗಳಿಗೆ ಉದ್ದೇಶಿಸಿ ಬರೆಯಬೇಕಾಗುತ್ತದೆ.
 
ಒಕ್ಕೂಟದ ಕಾರ್ಯನಿರ್ವಾಹಕ ಶಕ್ತಿಯನ್ನು ರಾಷ್ಟ್ರಪತಿಗಳಿಗೆ ವಹಿಸಲಾಗಿದ್ದು, ರಾಷ್ಟ್ರಪತಿಗಳು ಸ್ವತಃ ನೇರವಾಗಿ ಅಥವಾ ಸಂವಿಧಾನದ ಪ್ರಕಾರ ತಮ್ಮ ಕಿರಿಯ ಅಧಿಕಾರಿಗಳ ಮೂಲಕ ಚಲಾಯಿಸಬಹುದಾಗಿದೆ. ಸಂವಿಧಾನದ ನಿಬಂಧನೆಗಳ ಪ್ರಕಾರ, ಕೇಂದ್ರ ಸಂಪುಟದ ನಿರ್ಧಾರದ ಆಧಾರದಲ್ಲಿ ಲೋಕಸಭೆಯನ್ನು ವಿಸರ್ಜನೆಗೊಳಿಸುವುದಕ್ಕೂ ರಾಷ್ಟ್ರಪತಿಗಳಿಗೆ ಅಧಿಕಾರವಿದೆ. 

ಸಂಸತ್ ನ ಉಭಯ ಸದನಗಳು ಕಾರ್ಯನಿರ್ವಹಣೆಯಲ್ಲಿರುವಾಗ ಹೊರತುಪಡಿಸಿ, ಯಾವಾಗ ಬೇಕಾದರೂ ಸುಗ್ರೀವಾಜ್ಞೆಗಳನ್ನು ಪ್ರಕಟಿಸುವ ಅಧಿಕಾರವನ್ನು ರಾಷ್ಟ್ರಪತಿಗಳು ಹೊಂದಿರುತ್ತಾರೆ.

ಆರ್ಥಿಕ ಹಾಗೂ ಹಣಕ್ಕೆ ಸಂಬಂಧಿಸಿದ ಮಸೂದೆಗಳನ್ನು ಮಂಡಿಸುವುದಕ್ಕೆ ಶಿಫಾರಸು ಹಾಗೂ ಮಂಡನೆಯಾಗಿರುವ ಮಸೂದೆಗಳನ್ನು ಅನುಮೋದಿಸುವುದು, ಹಿಂಪಡೆಯುವುದು, ಕೆಲವು ಸಂದರ್ಭಗಳಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವ ಅಧಿಕಾರವನ್ನೂ ರಾಷ್ಟ್ರಪತಿಗಳು ಹೊಂದಿದ್ದಾರೆ. ಯಾವುದೇ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾದಲ್ಲಿ, ರಾಷ್ಟ್ರಪತಿಗಳು ಆ ರಾಜ್ಯದ ಸರ್ಕಾರದ ಕಾರ್ಯನಿರ್ವಹಣೆಯನ್ನು ತಾತ್ಕಾಲಿಕವಾಗಿ ವಹಿಸಿಕೊಳ್ಳಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com