ಭಾರಿ ಮಳೆ: ಅಮರನಾಥ ಯಾತ್ರೆ ಸ್ಥಗಿತ, 4 ಸಾವಿರ ಯಾತ್ರಾರ್ಥಿಗಳ ಸ್ಥಳಾಂತರ

ಪವಿತ್ರ ಅಮರನಾಥ ಗುಹೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ ಮುಂದುವರಿದಿದ್ದು, ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.
ಅಮರನಾಥ ಯಾತ್ರೆ
ಅಮರನಾಥ ಯಾತ್ರೆ

ಶ್ರೀನಗರ: ಪವಿತ್ರ ಅಮರನಾಥ ಗುಹೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ ಮುಂದುವರಿದಿದ್ದು, ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.

ಭಾರಿ ಮಳೆ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಪಂಚತಾರ್ಣಿ ಮತ್ತು ಅಮರನಾಥ್ ಗುಹೆಯ ನಡುವೆ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಹವಾಮಾನ ಸುಧಾರಿಸಿದ ನಂತರ ಯಾತ್ರೆಯನ್ನು ಪುನರಾರಂಭಿಸಲಾಗುವುದು ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಇಂದು ಮಧ್ಯಾಹ್ನ ಪವಿತ್ರ ಗುಹಾಂತರ ದೇಗುಲದ ಸುತ್ತಲಿನ ಪರ್ವತಗಳಲ್ಲಿ ಭಾರೀ ಮಳೆಯಾಗಿದ್ದು, ಇದರಿಂದಾಗಿ ಸಮೀಪದ ನದಿಯಲ್ಲಿ ನೀರಿನ ಮಟ್ಟವೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ಅಮರನಾಥ್ ಗುಹೆ ಸುತ್ತ ಪ್ರವಾಹದ ಭೀತಿ ಎದುರಾಗಿದೆ ಎಂದು ಅವರು ಹೇಳಿದರು.

ಯಾತ್ರಾರ್ಥಿಗಳನ್ನು ಪಂಚತಾರ್ಣಿ ಶಿಬಿರಕ್ಕೆ ರವಾನಿಸಲಾಗಿದ್ದು, ಮಳೆಯಿಂದಾಗಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳು ಅಥವಾ ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ಕು ಸಾವಿರ ಯಾತ್ರಾರ್ಥಿಗಳ ಸ್ಥಳಾಂತರ
ಇನ್ನು ಅಮರನಾಥ ಯಾತ್ರೆ ಸ್ಥಗಿತವಾದ ಹಿನ್ನಲೆಯಲ್ಲಿ ಪಂಚತಾರ್ನಿಯಿಂದ ಐಟಿಬಿಪಿ ಯೋಧರು ನಾಲ್ಕು ಸಾವಿರ ಯಾತ್ರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಈ ಪ್ರದೇಶದಲ್ಲಿ ಇದುವರೆಗೆ ಪ್ರವಾಹದಂತಹ ಪರಿಸ್ಥಿತಿ ಇಲ್ಲ. ಆಡಳಿತ ಮಂಡಳಿ ಎಚ್ಚರಿಕೆಯನ್ನೂ ನೀಡಿದೆ. ಹವಾಮಾನ ಕೇಂದ್ರ ಶ್ರೀನಗರ ನೀಡಿರುವ ಮಾಹಿತಿ ಪ್ರಕಾರ, ಜುಲೈ 28 ರವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com