ಬಂಧಿತ ಪಾರ್ಥ ಚಟರ್ಜಿಯನ್ನು ಸಚಿವ ಸ್ಥಾನ ಮತ್ತು ಪಕ್ಷದಿಂದ ವಜಾಗೊಳಿಸಿ: ಟಿಎಂಸಿ ನಾಯಕರ ಆಗ್ರಹ

ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಪಶ್ಚಿಮ ಬಂಗಾಳ ಕೈಗಾರಿಕೆ ಸಚಿವ ಪಾರ್ಥ ಚಟರ್ಜಿ ಅವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕು ಮತ್ತು ಪಕ್ಷದಿಂದಲೂ ಉಚ್ಚಾಟಿಸಬೇಕು ಎಂದು ಟಿಎಂಸಿ ರಾಜ್ಯ ಪ್ರಧಾನ...
ಪಾರ್ಥ ಚಟರ್ಜಿ
ಪಾರ್ಥ ಚಟರ್ಜಿ

ಕೋಲ್ಕತ್ತಾ: ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಪಶ್ಚಿಮ ಬಂಗಾಳ ಕೈಗಾರಿಕೆ ಸಚಿವ ಪಾರ್ಥ ಚಟರ್ಜಿ ಅವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕು ಮತ್ತು ಪಕ್ಷದಿಂದಲೂ ಉಚ್ಚಾಟಿಸಬೇಕು ಎಂದು ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಅವರು ಗುರುವಾರ ಒತ್ತಾಯಿಸಿದ್ದಾರೆ.

ಚಟರ್ಜಿ ಅವರ ನಿಕಟವರ್ತಿ ಅರ್ಪಿತಾ ಮುಖರ್ಜಿಯವರೊಂದಿಗೆ ನಂಟು ಹೊಂದಿರುವ ಅಪಾರ್ಟ್‌ಮೆಂಟ್‌ಗಳಿಂದ ಸುಮಾರು 50 ಕೋಟಿ ರೂಪಾಯಿ ನಗದು ಮತ್ತು ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಆಸ್ತಿ ಮತ್ತು ವಿದೇಶಿ ವಿನಿಮಯದ ದಾಖಲೆಗಳು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

"ಪಾರ್ಥ ಚಟರ್ಜಿ ಅವರನ್ನು ಸಚಿವ ಸಂಪುಟದಿಂದ ಮತ್ತು ಪಕ್ಷದ ಎಲ್ಲಾ ಹುದ್ದೆಗಳಿಂದ ತಕ್ಷಣವೇ ವಜಾಗೊಳಿಸಬೇಕು. ಅವರನ್ನು ಉಚ್ಚಾಟಿಸಬೇಕು. ನನ್ನ ಈ ಹೇಳಿಕೆಯು ತಪ್ಪೆಂದು ಪರಿಗಣಿಸಿದರೆ, ನನ್ನನ್ನು ಎಲ್ಲಾ ಹುದ್ದೆಗಳಿಂದ ತೆಗೆದುಹಾಕಲು ಪಕ್ಷಕ್ಕೆ ಎಲ್ಲ ಅಧಿಕಾರ ಇದೆ. ನಾನು ಟಿಎಂಸಿಯ ಸೈನಿಕನಾಗಿ ಮುಂದುವರಿಯುತ್ತೇನೆ" ಎಂದು ಪಕ್ಷದ ವಕ್ತಾರರೂ ಆಗಿರುವ ಘೋಷ್ ಟ್ವೀಟ್ ಮಾಡಿದ್ದಾರೆ.

ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ತಮಗೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಟಿಎಂಸಿ ವಕ್ತಾರ ದೇಬಂಗ್ಶು ಭಟ್ಟಾಚಾರ್ಯ ಅವರು ಸಹ ಚಟರ್ಜಿಯನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಒತ್ತಾಯಿಸಿದ್ದಾರೆ. ಒಬ್ಬ ಪಕ್ಷದ ಕಾರ್ಯಕರ್ತನಾಗಿ ಒಬ್ಬ ವ್ಯಕ್ತಿಯಿಂದ ನಾವು ಸಾರ್ವಜನಿಕವಾಗಿ ಮುಜುಗರ ಅನುಭವಿಸಬಾರದು. ಪಕ್ಷದ ನಾಯಕತ್ವವು ಇದನ್ನು ಗಮನಿಸಿ ಅವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಹೇಳಿದ್ದಾರೆ.

ಇಡಿ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಂಡಿದ್ದರೂ ಸಹ ಚಟರ್ಜಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದಕ್ಕಾಗಿ ವಿರೋಧ ಪಕ್ಷ ಬಿಜೆಪಿ ಮತ್ತು ಸಿಪಿಐ(ಎಂ), ಟಿಎಂಸಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಮಧ್ಯೆ ಟಿಎಂಸಿ ನಾಯಕ ಈ ಹೇಳಿಕೆ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com