ಪ್ರವಾದಿ ಕುರಿತ ಹೇಳಿಕೆ ವಿವಾದ: ವಿಎಫ್ಎಕ್ಸ್ ಮೂಲಕ ನೂಪುರ್ ಶರ್ಮಾ ತಲೆ ಕತ್ತರಿಸಿದ್ದ ಕಾಶ್ಮೀರದ ಯುಟ್ಯೂಬರ್ ಕ್ಷಮೆಯಾಚನೆ!!

ಬಿಜೆಪಿ ಮಾಜಿ ವಕ್ತಾರೆ ಹಾಗೂ ವಿವಾದಿತ ನೂಪುರ್ ಶರ್ಮಾ ಅವರ ತಲೆ ಕತ್ತರಿಸುವ ವಿಎಫ್‌ಎಕ್ಸ್ ವಿಡಿಯೊ (ಅಣಕು ವಿಡಿಯೊ) ಹಾಕಿದ್ದ ಕಾಶ್ಮೀರ ಮೂಲದ ಯೂಟ್ಯೂಬರ್ ವಿಡಿಯೋ ವೈರಲ್ ಆಗುತ್ತಲೇ ಇದೀಗ ಬಹಿರಂಗ ಕ್ಷಮೆ ಕೇಳಿದ್ದಾನೆ.
ಯೂಟ್ಯೂಬರ್
ಯೂಟ್ಯೂಬರ್

ಶ್ರೀನಗರ: ಬಿಜೆಪಿ ಮಾಜಿ ವಕ್ತಾರೆ ಹಾಗೂ ವಿವಾದಿತ ನೂಪುರ್ ಶರ್ಮಾ ಅವರ ತಲೆ ಕತ್ತರಿಸುವ ವಿಎಫ್‌ಎಕ್ಸ್ ವಿಡಿಯೊ (ಅಣಕು ವಿಡಿಯೊ) ಹಾಕಿದ್ದ ಕಾಶ್ಮೀರ ಮೂಲದ ಯೂಟ್ಯೂಬರ್ ವಿಡಿಯೋ ವೈರಲ್ ಆಗುತ್ತಲೇ ಇದೀಗ ಬಹಿರಂಗ ಕ್ಷಮೆ ಕೇಳಿದ್ದಾನೆ.

ಯೂಟ್ಯೂಬರ್ ಫೈಸಲ್ ವಾನಿ ಎಂಬಾತ ನೂಪುರ್ ಶರ್ಮಾ ಪ್ರವಾದಿ ಮಹಮ್ಮದರ ಬಗ್ಗೆ ಮಾಡಿದ್ದ ವಿವಾದ ಭುಗಿಲೆದ್ದ ನಂತರ ಅವರ ಮೇಲೆ ಆಕ್ರೋಶಗೊಂಡು ತನ್ನ ಯೂಟ್ಯೂಬ್ ಖಾತೆಯಲ್ಲಿ ಕೊಡಲಿಯಿಂದ ತಲೆ ಕತ್ತರಿಸುವ ರೀತಿ ಹಿಂಸಾತ್ಮಕ ವಿಎಫ್‌ಎಕ್ಸ್ ವಿಡಿಯೊ ಹಾಕಿದ್ದ. Deep Pain Fitness ಎಂಬ ಚಾನಲ್‌ನಲ್ಲಿ ವಿಡಿಯೊ ಹಾಕಿ ‘ನೂಪುರ್ ಮಾಡಿದ ತಪ್ಪಿಗೆ ತಲೆತೆಗೆಯುವುದೇ ಪರಿಹಾರ’ ಎಂದು ಹೇಳಿದ್ದ. 

ಈ ವಿಡಿಯೊ ಸಾಕಷ್ಟು ವೈರಲ್ ಕೂಡ ಆಗಿತ್ತು. ಅಲ್ಲದೆ ಫೈಸಲ್ ವಾನಿ ನಡೆಗೆ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಫೈಸಲ್ ವಾನಿಯ ಹಿಂಸಾತ್ಮಕ ವಿಡಿಯೊ ಬಗ್ಗೆ ಯೂಟ್ಯೂಬ್ ಕಂಪನಿಗೆ ದೂರುಗಳು ಹಾಗೂ ಕೆಲ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ಈ ಸಂಬಂಧ ಫೈಸಲ್ ವಾನಿಯನ್ನು ಪೊಲೀಸರು ಬಂಧಿಸುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.

ಇದರ ಬೆನ್ನಲ್ಲೇ ತನ್ನ ತಪ್ಪನ್ನು ಅರಿತುಕೊಂಡ ಫೈಸಲ್, ತಾನು ತಪ್ಪು ಮಾಡಿದ್ದೇನೆ. ನನ್ನ ವಿಡಿಯೊ ಹಿಂಸೆಗೆ ಪ್ರಚೋಧನೆ ನೀಡುವಂತದ್ದಾಗಿದೆ. ಅದನ್ನು ನಾನು ಡಿಲೀಟ್ ಮಾಡಿದ್ದೇನೆ. ನಾನು ಮಾಡಿದ ತಪ್ಪಿಗೆ ನನ್ನನ್ನು ದಯವಿಟ್ಟು ಕ್ಷಮಿಸಿ. ನೂಪುರ್ ಶರ್ಮಾ ಪ್ರವಾದಿ ಮಹಮ್ಮದ್‌ರ ಬಗ್ಗೆ ನೀಡಿದ್ದ ಹೇಳಿಕೆಯನ್ನು ನಾನು ಕ್ಷಮಿಸುತ್ತೇನೆ. ಏಕೆಂದರೆ ನನಗೆ ಇಸ್ಲಾಂ ಧರ್ಮ ಸಹಿಷ್ಣುತೆಯನ್ನು ಕಲಿಸಿದೆ’ ಎಂದು ಹೇಳಿದ್ದಾನೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com