ಶರದ್ ಪವಾರ್ ಭೇಟಿ ಮಾಡಿದ ಮಮತಾ; ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಲು ಎನ್ ಸಿಪಿ ಮುಖ್ಯಸ್ಥ ನಕಾರ

ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಚಟುವಟಿಕೆ ತೀವ್ರಗೊಂಡಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಎಡರಂಗದ ನಾಯಕರು ಮಂಗಳವಾರ...
ಶರದ್ ಪವಾರ್ - ಮಮತಾ ಬ್ಯಾನರ್ಜಿ
ಶರದ್ ಪವಾರ್ - ಮಮತಾ ಬ್ಯಾನರ್ಜಿ

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಚಟುವಟಿಕೆ ತೀವ್ರಗೊಂಡಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಎಡರಂಗದ ನಾಯಕರು ಮಂಗಳವಾರ ದೆಹಲಿಯಲ್ಲಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದಾರೆ.

ಜುಲೈ 18 ರ ಚುನಾವಣೆಗೆ ರಾಷ್ಟ್ರಪತಿ ಅಭ್ಯರ್ಥಿಯ ಕುರಿತು ಒಮ್ಮತದ ನಿರ್ಧಾರ ಕೈಗೊಳ್ಳಲು ಮಮತಾ ಬ್ಯಾನರ್ಜಿ ಕರೆದಿರುವ ಪ್ರತಿಪಕ್ಷಗಳ ಸಭೆಗೆ ಒಂದು ದಿನ ಮೊದಲು ಉಭಯ ನಾಯಕರು ಭೇಟಿಯಾಗಿದ್ದು, ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗುವಂತೆ ಶರದ್ ಪವಾರ್ ಅವರ ಮನವೊಲಿಸಲಾಗುತ್ತಿದೆ.

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಮತ್ತು ಎನ್‌ಸಿಪಿ ನಾಯಕರಾದ ಪ್ರಫುಲ್ ಪಟೇಲ್ ಹಾಗೂ  ಪಿ ಸಿ ಚಾಕೊ ಅವರು ಸಹ ಇಂದು ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದಾರೆ.

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ  ಸಿಪಿಐ(ಎಂ) ನಾಯಕ ಯೆಚೂರಿ ಅವರು, ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ಶರದ್ ಪವಾರ್ ಅವರು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.

ರಾಷ್ಟ್ರಪತಿ ಚುನಾವಣೆಗೆ ಪವಾರ್ ಅವರು ಪ್ರತಿಪ್ರತಿಪಕ್ಷಗಳ ಅಭ್ಯರ್ಥಿಯಾಗುವುದಿಲ್ಲ ಎಂದು ನನಗೆ ತಿಳಿಸಲಾಗಿದೆ. ಆದರೆ ಇತರ ಹೆಸರುಗಳು ಪರಿಗಣನೆಯಲ್ಲಿವೆ ಎಂದು ಯೆಚೂರಿ ತಿಳಿಸಿದ್ದಾರೆ.

ಎನ್ ಸಿಪಿ ಈಗಾಗಲೇ ಶರದ್ ಪವಾರ್ ಅವರು ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದೆ.

“ನಾನು ರೇಸ್‌ನಲ್ಲಿ ಇಲ್ಲ, ನಾನು ರಾಷ್ಟ್ರಪತಿ ಹುದ್ದೆಗೆ ವಿರೋಧ ಪಕ್ಷದ ಅಭ್ಯರ್ಥಿಯಾಗುವುದಿಲ್ಲ” ಎಂದು ಮಾಜಿ ಕೇಂದ್ರ ಸಚಿವರಾದ ಶರದ್ ಪವಾರ್ ನಿನ್ನೆ ಸಂಜೆ ಮುಂಬೈನಲ್ಲಿ ನಡೆದ ತಮ್ಮ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಭೆಯಲ್ಲಿ ಹೇಳಿದ್ದರು.

ರಾಷ್ಟ್ರಪತಿ ಅಭ್ಯರ್ಥಿಯಾಗಿ ಪವಾರ್ ಅವರಿಗೆ ಕಾಂಗ್ರೆಸ್ ಬೆಂಬಲ ಸೂಚಿಸಿದ ನಂತರ ಈ ನಿರ್ಧಾರ ಹೊರಬಿದ್ದಿದೆ.  ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಗಾಂಧಿಯವರ ಸಂದೇಶದೊಂದಿಗೆ ಕಳೆದ ವಾರ ಮುಂಬೈನ ಮನೆಯಲ್ಲಿ ಎನ್‌ಸಿಪಿ ನಾಯಕರನ್ನು ಭೇಟಿಯಾದರು. ಆದರೆ ಎನ್‌ಸಿಪಿ ತಮ್ಮ ನಾಯಕರಿಗೆ ರಾಷ್ಟ್ರಪತಿ ಹುದ್ದೆಯಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದೆ.

ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ನಾಳೆ ಸಿಎಂ ಮಮತಾ ಬ್ಯಾನರ್ಜಿ ನವದೆಹಲಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಮಧ್ಯಾಹ್ನ 3 ಗಂಟೆಗೆ ಎಲ್ಲಾ ವಿಪಕ್ಷಗಳ ಸಭೆ ಕರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com