ದೆಹಲಿಯಲ್ಲಿ ಪ್ರತಿಭಟನೆ ವೇಳೆ ಪೊಲೀಸರಿಂದ ‘ಕೆಟ್ಟ ವರ್ತನೆ’: ಕಾಂಗ್ರೆಸ್ ಸಂಸದರಿಂದ ಸ್ಪೀಕರ್, ಉಪ ರಾಷ್ಟ್ರಪತಿ ಭೇಟಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರಣೆ ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ದೆಹಲಿ ಪೊಲೀಸರು ಕೆಲವು ಮಹಿಳಾ ಸಂಸದರು ಸೇರಿದಂತೆ ಪಕ್ಷದ ಸಂಸದರೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ...
ಕಾಂಗ್ರೆಸ್ ಪ್ರತಿಭಟನೆ
ಕಾಂಗ್ರೆಸ್ ಪ್ರತಿಭಟನೆ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರಣೆ ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ದೆಹಲಿ ಪೊಲೀಸರು ಕೆಲವು ಮಹಿಳಾ ಸಂಸದರು ಸೇರಿದಂತೆ ಪಕ್ಷದ ಸಂಸದರೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ಸಂಸದರು, ಈ ಸಂಬಂಧ ಗುರುವಾರ ಲೋಕಸಭೆ ಸ್ಪೀಕರ್ ಮತ್ತು ರಾಜ್ಯಸಭಾ ಅಧ್ಯಕ್ಷರನ್ನು ಭೇಟಿ ಮಾಡಿದ್ದಾರೆ.

ಲೋಕಸಭೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿದ್ದು, ಕರೂರ್ ಸಂಸದೆ ಜೋತಿಮಣಿ ಸೇರಿದಂತೆ ಪಕ್ಷದ ಕೆಲವು ಸಂಸದರನ್ನು ದೆಹಲಿ ಪೊಲೀಸರು ಎಳೆದೊಯ್ದಿದ್ದಾರೆ ಮತ್ತು ಅವರ ಬಟ್ಟೆಗಳನ್ನು ಹರಿದಿದ್ದಾರೆ ಎಂದು ದೂರಿದ್ದಾರೆ.

ಕಾಂಗ್ರೆಸ್ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸ್ ಸಿಬ್ಬಂದಿ ಬುಧವಾರ ತಮ್ಮನ್ನು ಬಲವಂತವಾಗಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸ್ಪೀಕರ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚೌಧರಿ, "ನಾವು ಸ್ಪೀಕರ್ ಅವರನ್ನು ಭೇಟಿ ಮಾಡಿದ್ದೇವೆ. ದೆಹಲಿ ಪೊಲೀಸರು ನಮ್ಮ ಸಂಸದರು ಮತ್ತು ನಾಯಕರನ್ನು ಹೇಗೆ ನಡೆಸಿಕೊಂಡರು ಎಂದು ಅವರಿಗೆ ವಿವರಿಸಿದ್ದು, ಆರೋಪಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದೇವೆ" ಎಂದು ಹೇಳಿದರು.

ಕಾಂಗ್ರೆಸ್‌ನ ರಾಜ್ಯಸಭಾ ಸಂಸದರ ಮತ್ತೊಂದು ನಿಯೋಗ ಉಪರಾಷ್ಟ್ರಪತಿ, ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ದೆಹಲಿ ಪೊಲೀಸರಿಂದ ಸಂಸದರ ಹಕ್ಕುಚ್ಯುತಿಯಾಗಿರುವುದನ್ನು ಅವರ ಗಮನಕ್ಕೆ ತಂದಿದೆ.

ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ನಿಯೋಗದಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಪಿ ಚಿದಂಬರಂ, ಜೈರಾಮ್ ರಮೇಶ್ ಮತ್ತು ಕೆಸಿ ವೇಣುಗೋಪಾಲ್ ಅವರು ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com