ಅಗ್ನಿಪಥ್: ಅಗ್ನಿವೀರ್ ಅರ್ಜಿ ಸಲ್ಲಿಸಲು ಷರತ್ತು ಅನ್ವಯ.. ಅರ್ಜಿದಾರರು ಇದನ್ನು ಸಾಬೀತು ಮಾಡಬೇಕು!

ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ ಗೆ ಅರ್ಜಿ ಸಲ್ಲಿಸುವವರಿಗೆ ಷರತ್ತು ವಿಧಿಸಲಾಗಿದ್ದು, ನೇಮಕಾತಿ ಪ್ರಕ್ರಿಯೆಗೆ ಪ್ರಮಾಣಪತ್ರ ಕಡ್ಡಾಯ ಎಂದು ಸೇನೆ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ ಗೆ ಅರ್ಜಿ ಸಲ್ಲಿಸುವವರಿಗೆ ಷರತ್ತು ವಿಧಿಸಲಾಗಿದ್ದು, ನೇಮಕಾತಿ ಪ್ರಕ್ರಿಯೆಗೆ ಪ್ರಮಾಣಪತ್ರ ಕಡ್ಡಾಯ ಎಂದು ಸೇನೆ ಹೇಳಿದೆ.

ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ ವಿರೋಧಿಸಿ ದೇಶದ ಹಲವು ಭಾಗಗಳಲ್ಲಿ ಯುವ ಜನತೆ ಪ್ರತಿಭಟನೆ ನಡೆಸುತ್ತಿರುವ ಹಿನ್ನಲೆಯಲ್ಲಿ ಸೇನಾಮುಖ್ಯಸ್ಥರು ಮಹತ್ವದ ಕ್ರಮಕ್ಕೆ ಮುಂದಾಗಿದ್ದು, ನೇಮಕಾತಿ ಪ್ರಕ್ರಿಯೆಗೆ ಪ್ರಮಾಣಪತ್ರ ಕಡ್ಡಾಯ ಎಂದು ಸೇನೆ ಹೇಳಿದೆ. ಈ ಕುರಿತು ಮಾಹಿತಿ ನೀಡಿರುವ ಸೇನಾ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್‌ ಜನರಲ್‌ ಅನಿಲ್‌ ಪುರಿ ಅವರು, 'ಕೇಂದ್ರ ಸರ್ಕಾರ ಘೋಷಿಸಿರುವ ಸೇನಾ ನೇಮಕಾತಿಗೆ ಸಂಬಂಧಿಸಿದ 'ಅಗ್ನಿಪಥ' ಯೋಜನೆಗೆ ಅರ್ಜಿ ಸಲ್ಲಿಸುವವರು ಲಿಖಿತ ರೂಪದಲ್ಲಿ ಪ್ರತಿಜ್ಞಾ ಘೋಷಣೆಯನ್ನು ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಭಾರತೀಯ ಸೇನೆ, ನೌಕಾದಳ ಹಾಗೂ ವಾಯುಪಡೆಯ ಉನ್ನತ ಅಧಿಕಾರಿಗಳು ಹಾಗೂ ಅನಿಲ್‌ ಪುರಿ ಅವರು ಅಗ್ನಿವೀರರ ನೇಮಕಾತಿಯ ಕುರಿತು ಮಾಧ್ಯಮಗಳಿಗೆ ಭಾನುವಾರ ಮಾಹಿತಿ ನೀಡಿದರು. 'ಅಗ್ನಿವೀರರು, ತಾವು ಯಾವುದೇ ಹಿಂಸಾತ್ಮಕ ಪ್ರತಿಭಟನೆ ಅಥವಾ ಗಲಭೆಗಳಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಘೋಷಿಸಿ ಲಿಖಿತ ಪ್ರತಿಜ್ಞಾವಚನವನ್ನು ನೀಡಬೇಕು' ಎಂದಿದ್ದಾರೆ.

ಎಫ್ಐಆರ್ ಇದ್ದರೆ ಅವಕಾಶ ಇಲ್ಲ
ಸೇನಾ ನೇಮಕಾತಿ ಬಯಸುವ ಅಭ್ಯರ್ಥಿಗಳನ್ನು 'ಅಗ್ನಿವೀರರಾಗಿ' ಪರಿಗಣಿಸುವುದಕ್ಕೂ ಮುನ್ನ ಅವರ ಹಿನ್ನೆಲೆಯನ್ನು ಪೊಲೀಸ್‌ ಪರಿಶೀಲನೆಗೆ ಒಳಪಡಿಸಲಾಗುತ್ತದೆ ಎಂದಿರುವ ಅವರು, 'ಸಶಸ್ತ್ರ ಪಡೆಗಳಲ್ಲಿ ಅಶಿಸ್ತಿಗೆ ಅವಕಾಶವಿಲ್ಲ. ಯಾವುದೇ ಅಭ್ಯರ್ಥಿಯ ವಿರುದ್ಧ ಯಾವುದೇ ಎಫ್ಐಆರ್‌ ದಾಖಲಾಗಿದ್ದರೆ, ಅವರು ಅಗ್ನಿವೀರರ ಜೊತೆಯಾಗಲು ಅವಕಾಶ ಇರುವುದಿಲ್ಲ. ಭಾರತೀಯ ಸೇನೆಯ ಅಡಿಪಾಯ ಶಿಸ್ತು. ಬೆಂಕಿ ಹಚ್ಚುವುದು, ವಿಧ್ವಂಸಕ ಕೃತ್ಯಗಳಿಗೆ ಇಲ್ಲಿ ಜಾಗವಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ಪ್ರತಿಭಟನೆ ಅಥವಾ ವಿಧ್ವಂಸಕ ಕೃತ್ಯದ ಭಾಗವಾಗಿಲ್ಲ ಎಂದು ಪ್ರಮಾಣಪತ್ರವನ್ನು ತೋರಿಸಬೇಕಾಗುತ್ತದೆ. ಪೊಲೀಸ್ ಪ್ರಮಾಣಪತ್ರ ನೂರಕ್ಕೆ ನೂರು ಸರಿಯಾಗಿರುತ್ತದೆ. ಪ್ರಮಾಣಪತ್ರ ಇಲ್ಲದಿದ್ದರೆ ಸೇನೆ ಸೇರಲು ಸಾಧ್ಯವಿಲ್ಲ ಎಂದು ತಿಳಿಸಿದರು' ಎಂದು ಹೇಳಿದ್ದಾರೆ.

ಅಗ್ನಿಪಥ ಯೋಜನೆಯಡಿಯಲ್ಲಿ ನೇಮಕಗೊಳ್ಳಲು ಗರಿಷ್ಠ ವಯಸ್ಸಿನ ಮಿತಿಯನ್ನು 21 ರಿಂದ 23 ವರ್ಷಗಳಿಗೆ ಹೆಚ್ಚಿಸಿ ಕೇಂದ್ರ ಸರ್ಕಾರ ಗುರುವಾರ ರಾತ್ರಿ ತೀರ್ಮಾನಿಸಿತ್ತು. ಅದರ ಬೆನ್ನಲ್ಲೇ ಈ ಯೋಜನೆಯಡಿ ನೇಮಕಗೊಂಡ ಅಗ್ನಿವೀರರು 4 ವರ್ಷಗಳ ಅವಧಿ ಪೂರೈಸಿದ ಬಳಿಕ, ವಿವಿಧ ನೇಮಕಾತಿಗಳಲ್ಲಿ ಶೇಕಡ 10 ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿದೆ. ಜತೆಗೆ, ಸಾರ್ವಜನಿಕ ಉದ್ದಿಮೆಗಳಲ್ಲೂ (ಪಿಎಸ್‌ಯು) ಅಗ್ನಿವೀರರನ್ನು ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ.

ಅಗ್ನಿಪಥ ಯೋಜನೆಯಲ್ಲಿನ ವಯೋಮಿತಿ, ಸೇವಾವಧಿ ಮತ್ತು ಪಿಂಚಣಿ ನಿಯಮಗಳ ಬಗ್ಗೆ ವಿರೋಧ ವ್ಯಕ್ತಪಡಿಸಿ ದೇಶದ ಹಲವು ಭಾಗಗಳಲ್ಲಿ ನಡೆದಿರುವ ಪ್ರತಿಭಟನೆಗಳು ಹಿಂಸಾರೂಪ ಪಡೆದಿವೆ. ಬಿಹಾರ ಸೇರಿದಂತೆ ಕೆಲವು ಕಡೆ ರೈಲಿನ ಬೋಗಿಗಳಿಗೆ ಬೆಂಕಿ ಹಚ್ಚಲಾಗಿದೆ. ಪೊಲೀಸರು ಮತ್ತು ಯುವ ಜನತೆಯ ನಡುವೆ ಸಂಘರ್ಷ ಉಂಟಾಗಿ ಗೋಲಿಬಾರ್‌ ಕೂಡ ನಡೆದಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಅಗ್ನಿಪಥ ಯೋಜನೆಯನ್ನು ಸಮರ್ಥಿಸಿಕೊಂಡಿರುವ ಸೇನಾ ವ್ಯವಹಾರಗಳ ಇಲಾಖೆಯು, ಯೋಜನೆಯನ್ನು ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com