ಎಕೆ-47 ರೈಫಲ್ ವಶಪಡಿಸಿಕೊಂಡ ಪ್ರಕರಣ: ಬಿಹಾರ ಶಾಸಕನಿಗೆ 10 ವರ್ಷ ಜೈಲು ಶಿಕ್ಷೆ
ಎಕೆ-47 ರೈಫಲ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಶಾಸಕ ಅನಂತ್ ಕುಮಾರ್ ಸಿಂಗ್ ಅಲಿಯಾಸ್ ಅನಂತ್ ಸಿಂಗ್ ಅವರಿಗೆ ವಿಚಾರಣಾ ನ್ಯಾಯಾಲಯ ಮಂಗಳವಾರ ಶಸ್ತ್ರಾಸ್ತ್ರ ಕಾಯ್ದೆ ಅಡಿ 10 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
Published: 21st June 2022 07:09 PM | Last Updated: 21st June 2022 07:09 PM | A+A A-

ಸಾಂದರ್ಭಿಕ ಚಿತ್ರ
ಪಾಟ್ನಾ: ಎಕೆ-47 ರೈಫಲ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಶಾಸಕ ಅನಂತ್ ಕುಮಾರ್ ಸಿಂಗ್ ಅಲಿಯಾಸ್ ಅನಂತ್ ಸಿಂಗ್ ಅವರಿಗೆ ವಿಚಾರಣಾ ನ್ಯಾಯಾಲಯ ಮಂಗಳವಾರ ಶಸ್ತ್ರಾಸ್ತ್ರ ಕಾಯ್ದೆ ಅಡಿ 10 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ, ಜೂನ್ 14 ರಂದು ಆರೋಪಿ ಶಾಸಕ ಅನಂತ್ ಸಿಂಗ್ ತಪ್ಪಿತಸ್ಥರೆಂದು ತೀರ್ಪು ನೀಡಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿತ್ತು.
ಇದನ್ನು ಓದಿ: 'ಅಗ್ನಿಪಥ್' ಯೋಜನೆ ವಿರುದ್ಧ ಪ್ರತಿಭಟನೆ: ಬಿಹಾರದಲ್ಲಿ ರೈಲಿಗೆ ಬೆಂಕಿ, ಬಿಜೆಪಿ ಶಾಸಕನಿಗೆ ಗಾಯ
2019 ರಲ್ಲಿ ಪಾಟ್ನಾ ಜಿಲ್ಲೆಯ ಬಾರ್ಹ್ ಉಪ-ವಿಭಾಗದ ಲಾಡ್ಮಾದಲ್ಲಿ ಸಿಂಗ್ ಅವರ ಪೂರ್ವಜರ ಮನೆಯಿಂದ AK-47 ಅಸಾಲ್ಟ್ ರೈಫಲ್, ಎರಡು ಹ್ಯಾಂಡ್ ಗ್ರೆನೇಡ್ ಮತ್ತು 26 ಲೈವ್ ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಶಾಸಕನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಬೆಂಬಲಿಗರಿಂದ 'ಛೋಟೆ ಸರ್ಕಾರ್' ಎಂದು ಕರೆಯಿಸಿಕೊಳ್ಳುತ್ತಿದ್ದ ಸಿಂಗ್ ಅವರು 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದು, ವಿಧಾನಸಭೆ ಸದಸ್ಯತ್ವವನ್ನು ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಆದರೆ, ತೀರ್ಪಿನ ಪ್ರತಿಯನ್ನು ಪರಿಶೀಲಿಸಿದ ನಂತರ ತಮ್ಮ ಕಕ್ಷಿದಾರರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ಸಿಂಗ್ ಅವರ ಕಾನೂನು ಸಲಹೆಗಾರ ಸುನೀಲ್ ಸಿಂಗ್ ಅವರು ಹೇಳಿದ್ದಾರೆ.