'ಮಹಾ' ಸಂಘರ್ಷ; ಏಕನಾಥ್ ಶಿಂಧೆ ಸೇರಿ 12 ರೆಬೆಲ್ ಶಾಸಕರ ಅನರ್ಹತೆಗೆ ಶಿವಸೇನೆ ಅರ್ಜಿ

ಮಹಾರಾಷ್ಟ್ರದಲ್ಲಿ ಭುಗಿಲೆದ್ದಿರುವ ರಾಜಕೀಯ ಸಂಘರ್ಷ ತಾರಕಕ್ಕೇರಿದ್ದು, ಇದೀಗೆ ರೆಬೆಲ್ ಶಾಸಕರನ್ನು ಹಣಿಯಲು ಸಿಎಂ ಉದ್ಧವ್ ಠಾಕ್ರೆ ಬಣ ಶಾಸಕತ್ವ ಅನರ್ಹತೆ ಬಾಣ ಹೂಡಿದ್ದು, ಬಂಡಾಯ ಶಾಸಕರ ನಾಯಕ ಏಕನಾಥ್ ಶಿಂಧೆ ಸೇರಿದಂತೆ 12 ರೆಬೆಲ್ ಶಾಸಕರ ಅನರ್ಹತೆಗೆ ಶಿವಸೇನೆ ಮನವಿ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ಭುಗಿಲೆದ್ದಿರುವ ರಾಜಕೀಯ ಸಂಘರ್ಷ ತಾರಕಕ್ಕೇರಿದ್ದು, ಇದೀಗೆ ರೆಬೆಲ್ ಶಾಸಕರನ್ನು ಹಣಿಯಲು ಸಿಎಂ ಉದ್ಧವ್ ಠಾಕ್ರೆ ಬಣ ಶಾಸಕತ್ವ ಅನರ್ಹತೆ ಬಾಣ ಹೂಡಿದ್ದು, ಬಂಡಾಯ ಶಾಸಕರ ನಾಯಕ ಏಕನಾಥ್ ಶಿಂಧೆ ಸೇರಿದಂತೆ 12 ರೆಬೆಲ್ ಶಾಸಕರ ಅನರ್ಹತೆಗೆ ಶಿವಸೇನೆ ಮನವಿ ಮಾಡಿದೆ.

ಮೂಲಗಳ ಪ್ರಕಾರ ಪ್ರಸ್ತುತ ರೆಬೆಲ್ ಶಾಸಕರ ನಾಯಕತ್ವ ವಹಿಸಿರುವ ಏಕನಾಥ್ ಶಿಂಧೆ ಸೇರಿದಂತೆ ಅವರ ಬಣದಲ್ಲಿರುವ 12 ಶಾಸಕರನ್ನು ಅನರ್ಹಗೊಳಿಸುವಂತೆ  ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ನಾಯಕರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಉಪಸಭಾಪತಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಶಿವಸೇನೆ ಪಕ್ಷದ ಸಂಸದ ಅರವಿಂದ್ ಸಾವಂತ್ ಅವರು, 'ನಾವು ಡೆಪ್ಯೂಟಿ ಸ್ಪೀಕರ್ ಮುಂದೆ ಮನವಿ ಸಲ್ಲಿಸಿದ್ದೇವೆ ಮತ್ತು ಏಕನಾಥ್ ಶಿಂಧೆ ಸೇರಿದಂತೆ 12 ಶಾಸಕರು ನಿನ್ನೆಯ ಶಾಸಕಾಂಗ ಸಭೆಗೆ ಹಾಜರಾಗದ ಕಾರಣ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದೇವೆ ಎಂದು ಹೇಳಿದ್ದಾರೆ.

ಸಭೆಗೂ ಮುನ್ನ ನೋಟಿಸ್ ನೀಡಲಾಗಿದ್ದು, ಸಭೆಗೆ ಹಾಜರಾಗದಿದ್ದರೆ ಸಂವಿಧಾನದ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿತ್ತು. ಅದಾಗ್ಯೂ ಬಂಡಾಯ ಶಾಸಕರು ಹಾಜರಾಗಿಲ್ಲ. ಕೆಲವರು ಬರಲಿಲ್ಲ, ಇನ್ನು ಕೆಲವರು ಅನಗತ್ಯ ಕಾರಣಗಳನ್ನು ಕೊಟ್ಟಿದ್ದಾರೆ ಎಂದು ಸಾವಂತ್ ಹೇಳಿದ್ದಾರೆ.

ಅನರ್ಹತೆಗೆ ಪ್ರಸ್ತಾವನೆ ಸಲ್ಲಿಸಿರುವ 12 ಶಾಸಕರ ಪಟ್ಟಿಯಲ್ಲಿ ಏಕನಾಥ್ ಶಿಂಧೆ, ಪ್ರಕಾಶ್ ಸುರ್ವೆ, ತಾನಾಜಿ ಸಾವಂತ್, ಮಹೇಶ್ ಶಿಂಧೆ, ಅಬ್ದುಲ್ ಸತ್ತಾರ್, ಸಂದೀಪ್ ಭೂಮಾರೆ, ಭರತ್ ಗೊಗವಾಲೆ, ಸಂಜಯ್ ಶಿರ್ಸಾತ್, ಯಾಮಿನಿ ಯಾದವ್, ಅನಿಲ್ ಬಾಬರ್, ಬಾಲಾಜಿ ದೇವದಾಸ್ ಮತ್ತು ಲತಾ ಚೌಧರಿ ಅವರ ಹೆಸರುಗಳಿವೆ ಎಂದು ತಿಳಿದುಬಂದಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com