
ಮಾಯಾವತಿ
ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬಹುಜನ ಸಮಾಜವಾದಿ ಪಕ್ಷ ಬೆಂಬಲ ಘೋಷಿಸಿದೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಗೆದ್ದರೆ ದ್ರೌಪದಿ ಮುರ್ಮು ಭಾರತದ ರಾಷ್ಟ್ರಪತಿ ಹುದ್ದೆಯನ್ನಲಂಕರಿಸಿದ 2ನೇ ಮಹಿಳೆ ಹಾಗೂ ಮೊದಲ ಬುಡಕಟ್ಟು ನಾಯಕಿಯಾಗಿರಲಿದ್ದಾರೆ.
ಜುಲೈ.18 ರಂದು ನಡೆಯಲಿರುವ ಚುನಾವಣೆಗೆ ಜೂ.24 ರಂದು ಮುರ್ಮು ನಾಮಪತ್ರ ಸಲ್ಲಿಸಿಕೆ ಮಾಡಿದ್ದು ಪ್ರಧಾನಿ ಮೋದಿ ರಿಟರ್ನಿಂಗ್ ಅಧಿಕಾರಿಗೆ ಕಾಗದ ಪತ್ರಗಳನ್ನು ಹಸ್ತಾಂತರಿಸಿದ್ದರು.
ಆದಿವಾಸಿ ಸಮಾಜ ಬಿಎಸ್ ಪಿ ಪಕ್ಷದ ಅವಿಭಾಜ್ಯ ಅಂಗ ಎಂಬುದನ್ನು ಗಮನದಲ್ಲಿಟ್ಟುಕೊಂಡು ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡಲು ಪಕ್ಷ ನಿರ್ಧರಿಸಿದೆ ಎಂದು ಬಿಎಸ್ ಪಿ ನಾಯಕಿ ಮಾಯಾವತಿ ತಿಳಿಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಬಗ್ಗೆ ಟ್ವೀಟ್, ರಾಮ್ ಗೋಪಾಲ್ ವರ್ಮ ವಿರುದ್ಧ ದೂರು, ನಿರ್ದೇಶಕರ ಸ್ಪಷ್ಟನೆಯೇನು?
ಈ ನಿರ್ಧಾರ ಬಿಜೆಪಿ ಅಥವಾ ಎನ್ ಡಿಎ ಪರವಾಗಿಯೋ ಅಥವಾ ಯುಪಿಎ ವಿರುದ್ಧವಾಗಿಯೋ ತೆಗೆದುಕೊಂಡಿರುವುದಲ್ಲ. ಬದಲಾಗಿ, ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿಸುವುದಕ್ಕೆ ನಮ್ಮ ಪಕ್ಷ ಹಾಗೂ ಅದರ ಚಳುವಳಿಯನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಂಡಿರುವುದಾಗಿದೆ ಎಂದು ಮಾಯಾವತಿ ತಿಳಿಸಿದ್ದಾರೆ.
ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನು ನಿರ್ಧರಿಸುವಾಗ ವಿಪಕ್ಷಗಳು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಮಾಯಾವತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.