ಪಂಜಾಬ್ ನಲ್ಲಿ ಭಾರೀ ಹಿನ್ನಡೆ: ಸಿಎಂ ಭಗವಂತ್ ಮಾನ್ ರ ಲೋಕಸಭೆ ಕ್ಷೇತ್ರ ಕಳೆದುಕೊಂಡ ಎಎಪಿ!

ಪಂಜಾಬ್ ನ ಸಂಗ್ರೂರ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಡಳಿತ ಆಮ್ ಆದ್ಮಿ ಪಕ್ಷವು ಭಾರೀ ಸೋಲನ್ನು ಎದುರಿಸಿದೆ.
ಭಗವಂತ್ ಮಾನ್
ಭಗವಂತ್ ಮಾನ್

ಚಂಡೀಗಢ: ಪಂಜಾಬ್ ನ ಸಂಗ್ರೂರ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಡಳಿತ ಆಮ್ ಆದ್ಮಿ ಪಕ್ಷವು ಭಾರೀ ಸೋಲನ್ನು ಎದುರಿಸಿದೆ. ಶಿರೋಮಣಿ ಅಕಾಲಿ ದಳ  ಅಭ್ಯರ್ಥಿ ಸಿಮ್ರಂಜಿತ್ ಸಿಂಗ್ ಮಾನ್ ಅವರು ಕಳೆದ ಬಾರಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಹೊಂದಿದ್ದ ಲೋಕಸಭಾ ಕ್ಷೇತ್ರದಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿದರು.

ಸಿಮ್ರಂಜಿತ್ ಸಿಂಗ್ ಮಾನ್ ತಮ್ಮ ಎಎಪಿ ಪ್ರತಿಸ್ಪರ್ಧಿ ಗುರ್ಮೈಲ್ ಸಿಂಗ್ ಅವರನ್ನು ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ 5,800 ಮತಗಳ ಅಂತರದಿಂದ ಸೋಲಿಸಿದರು. 77 ವರ್ಷದ ಸಿಮ್ರಂಜಿತ್ ಸಿಂಗ್ ಮಾನ್ ಅವರು ಮಾಜಿ ಸಂಸದ ಮತ್ತು ಶಿರೋಮಣಿ ಅಕಾಲಿದಳದ (ಅಮೃತಸರ) ಅಧ್ಯಕ್ಷರಾಗಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ದಲ್ವಿರ್ ಸಿಂಗ್ ಗೋಲ್ಡಿ, ಬಿಜೆಪಿಯ ಕೇವಲ್ ಧಿಲ್ಲೋನ್ ಮತ್ತು ಅಕಾಲಿದಳದ ಕಮಲದೀಪ್ ಕೌರ್ ರಾಜೋನಾ ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ. ಜೂನ್ 23 ರಂದು ನಡೆದ ಉಪಚುನಾವಣೆಯಲ್ಲಿ  16 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು. ಬಿಗಿ ಭದ್ರತೆಯ ನಡುವೆ ಭಾನುವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಯಿತು.

ಈ ವರ್ಷದ ಆರಂಭದಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ನಂತರ ಭಗವಂತ್ ಮಾನ್ ಅವರು ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಉಪಚುನಾವಣೆ ನಡೆದಿತ್ತು. ಈಗ ರಾಜ್ಯದ ಮುಖ್ಯಮಂತ್ರಿಯಾಗಿರುವ ಭಗವಂತ್ ಮಾನ್ ಅವರು 2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಸಂಗ್ರೂರ್ ಕ್ಷೇತ್ರದಲ್ಲಿ ಗೆದ್ದಿದ್ದರು.

ಈ ವರ್ಷದ ಮಾರ್ಚ್‌ನಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅದ್ಭುತ ವಿಜಯದ ನಂತರ ನಡೆದ ಮೊದಲ ಪ್ರಮುಖ ಚುನಾವಣಾ ಕದನ ಇದಾಗಿದ್ದು ಆಡಳಿತ ಪಕ್ಷಕ್ಕೆ ಸೋಲಾಗಿದೆ. ಆಡಳಿತಾರೂಢ ಎಎಪಿಗೆ ಈ ಉಪಚುನಾವಣೆ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಪ್ರತಿಷ್ಠೆಯ ಯುದ್ಧವಾಗಿ ಕಂಡುಬಂದರೆ, ವಿರೋಧ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಎಸ್‌ಎಡಿ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಗೆಲುವು ದಾಖಲಿಸಲು ಎದುರು ನೋಡುತ್ತಿದ್ದವು.

2022 ರ ವಿಧಾನಸಭಾ ಚುನಾವಣೆಯಲ್ಲಿ ಸಂಗ್ರೂರ್ ಲೋಕಸಭೆ ಕ್ಷೇತ್ರಕ್ಕೊಳಪಡುವ ಎಲ್ಲಾ ಒಂಬತ್ತು ವಿಧಾನಸಭಾ ಕ್ಷೇತ್ರಗಳಾದ ಲೆಹ್ರಾ, ದಿರ್ಬಾ, ಬರ್ನಾಲಾ, ಸುನಮ್, ಭದೌರ್, ಮೆಹಲ್ ಕಲನ್, ಮಲೇರ್‌ಕೋಟ್ಲಾ, ಧುರಿ ಮತ್ತು ಸಂಗ್ರೂರ್ ಅನ್ನು ಎಎಪಿ ಗೆದ್ದುಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com