ಮಹಾ ರಾಜಕೀಯ ಬಿಕ್ಕಟ್ಟು; ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಂಡಾಯ ನಾಯಕ ಏಕನಾಥ್ ಶಿಂಧೆ
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಎಂವಿಎ ಮೈತ್ರಿ ಸರ್ಕಾರದ ಭವಿಷ್ಯ ಸುಪ್ರೀಂಕೋರ್ಟ್ ಕಟಕಟೆಗೇರಿದೆ. ಬಂಡಾಯ ನಾಯಕ ಏಕನಾಥ್ ಶಿಂಧೆ ಅವರು...
Published: 26th June 2022 08:58 PM | Last Updated: 27th June 2022 02:59 PM | A+A A-

ಏಕನಾಥ್ ಶಿಂಧೆ
ನವದೆಹಲಿ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಎಂವಿಎ ಮೈತ್ರಿ ಸರ್ಕಾರದ ಭವಿಷ್ಯ ಸುಪ್ರೀಂಕೋರ್ಟ್ ಕಟಕಟೆಗೇರಿದೆ. ಬಂಡಾಯ ನಾಯಕ ಏಕನಾಥ್ ಶಿಂಧೆ ಅವರು ತಾವು ಸೇರಿದಂತೆ ಇತರ 15 ಶಾಸಕರನ್ನು ಅನರ್ಹಗೊಳಿಸುವ ಶಿವಸೇನೆಯ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಈ ಪ್ರಕರಣದ ವಿಚಾರಣೆ ನಾಳೆ ನಡೆಯಲಿದೆ.
ಉಪಸಭಾಪತಿ ನರಹರಿ ಜಿರ್ವಾಲ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿ ಅಜಯ್ ಚೌಧರಿ ಅವರನ್ನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಿರುವುದನ್ನು ಏಕನಾಥ್ ಶಿಂಧೆ ಶಿಬಿರವು ಪ್ರಶ್ನಿಸಿದೆ.
ಇದನ್ನು ಓದಿ: 'ಮಹಾ ಸಂಘರ್ಷ'; ಶಿವಸೇನಾ ಬಂಡಾಯ ಶಾಸಕರಿಗೆ ‘ವೈ ಪ್ಲಸ್’ ಭದ್ರತೆ ಒದಗಿಸಿದ ಕೇಂದ್ರ ಸರ್ಕಾರ
ತಮ್ಮನ್ನು ಪದಚ್ಯುತಗೊಳಿಸುವ ವಿಷಯ ನಿರ್ಧಾರವಾಗುವವರೆಗೆ ಅನರ್ಹತೆ ಅರ್ಜಿಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಂತೆ ಉಪ ಸ್ಪೀಕರ್‌ಗೆ ಆದೇಶ ನೀಡುವಂತೆ ಬಂಡುಕೋರರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಅಲ್ಲದೆ ತಮ್ಮ ಕುಟುಂಬಗಳಿಗೆ ಭದ್ರತೆ ಒದಗಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆಯೂ ಅವರು ನ್ಯಾಯಾಲಯವನ್ನು ಕೋರಿದ್ದಾರೆ.
ಈ ವಾರದ ಆರಂಭದಲ್ಲಿ 16 ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಶಿವಸೇನೆ ಉಪ ಸ್ಪೀಕರ್‌ಗೆ ಮನವಿ ಸಲ್ಲಿಸಿದೆ. ಶಿಂಧೆ ಪಾಳಯವು ಈ ಕ್ರಮವನ್ನು ಕಾನೂನುಬಾಹಿರ ಎಂದು ಪ್ರತಿಪಾದಿಸಿದೆ. ಏಕೆಂದರೆ ಅನರ್ಹತೆಯು ಅಸ್ತ್ರ ವಿಧಾನಸಭೆಯಲ್ಲಿನ ವಿಷಯಗಳಿಗೆ ಮಾತ್ರ ಸಂಬಂಧಿಸಿದ್ದು , ಪಕ್ಷದ ಸಭೆಗಲ್ಲ ಎಂದಿದೆ.
ಬಂಡಾಯ ಸಚಿವರ ವಿರುದ್ಧ ಇತರ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಸಹ ಶಿವಸೇನೆ ಯೋಜಿಸುತ್ತಿದೆ. ಏಕನಾಥ್ ಶಿಂಧೆ, ಗುಲಾಬ್ರಾವ್ ಪಾಟೀಲ್ ಮತ್ತು ದಾದಾ ಭೂಸೆ ಅವರು ತಮ್ಮ ಖಾತೆಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಅಬ್ದುಲ್ ಸತ್ತಾರ್ ಮತ್ತು ಶಂಬುರಾಜೇ ದೇಸಾಯಿ ಕೂಡ ಕ್ರಮ ಎದುರಿಸುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಆಪ್ತರಾಗಿರುವ ಶಿವಸೇನೆಯ ಸಂಜಯ್ ರಾವತ್ ಅವರು ಇಂದು ಬಂಡುಕೋರರ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಾಳಾಸಾಹೇಬ್‌ಗೆ ದ್ರೋಹ ಬಗೆದವನು ಕಳೆದುಹೋಗಿದ್ದಾನೆ. ಇನ್ನು ಮುಂದೆ ಯಾರನ್ನು ನಂಬಬೇಕೆಂದು ನಾವು ನಿರ್ಧರಿಸಬೇಕು ಎಂದು ಹೇಳಿದ್ದಾರೆ.
ಶಿಂಧೆ ಅವರೊಂದಿಗೆ ಬೀಡುಬಿಟ್ಟಿರುವ ಶಾಸಕರಲ್ಲಿ ಕನಿಷ್ಠ 20 ಶಾಸಕರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸೇನಾ ಮೂಲಗಳು ಹೇಳಿವೆ. ಅವರಲ್ಲಿ ಕೆಲವರು ಬಿಜೆಪಿ ವಿಲೀನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.