ಉಪಚುನಾವಣೆ ಫಲಿತಾಂಶ ಬಳಿಕ ಬಿಜೆಪಿ ಜೊತೆಗಿನ ಘರ್ಷಣೆ: ತ್ರಿಪುರಾ ಕಾಂಗ್ರೆಸ್ ಮುಖ್ಯಸ್ಥ ಸೇರಿದಂತೆ 19 ಮಂದಿಗೆ ಗಾಯ!
ಕಾಂಗ್ರೆಸ್ ಭವನದ ಎದುರು ಇಂದು ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ನಡುವೆ ನಡೆದ ಘರ್ಷಣೆಯಲ್ಲಿ ತ್ರಿಪುರಾ ಪಿಸಿಸಿ ಮುಖ್ಯಸ್ಥ ಬಿರಜಿತ್ ಸಿನ್ಹಾ ಸೇರಿದಂತೆ 19 ಮಂದಿ ಗಾಯಗೊಂಡಿದ್ದಾರೆ.
Published: 26th June 2022 05:50 PM | Last Updated: 26th June 2022 05:50 PM | A+A A-

ಕಾಂಗ್ರೆಸ್ ಭವನ
ಅಗರ್ತಲಾ: ಕಾಂಗ್ರೆಸ್ ಭವನದ ಎದುರು ಇಂದು ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ನಡುವೆ ನಡೆದ ಘರ್ಷಣೆಯಲ್ಲಿ ತ್ರಿಪುರಾ ಪಿಸಿಸಿ ಮುಖ್ಯಸ್ಥ ಬಿರಜಿತ್ ಸಿನ್ಹಾ ಸೇರಿದಂತೆ 19 ಮಂದಿ ಗಾಯಗೊಂಡಿದ್ದಾರೆ.
ತ್ರಿಪುರದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಘರ್ಷಣೆ ಉಂಟಾಗಿತ್ತು. ಇನ್ನು ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.
ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಮೂರು ಮತ್ತು ಕಾಂಗ್ರೆಸ್ ಒಂದು ಸ್ಥಾನ ಗೆದ್ದಿದೆ. ಘರ್ಷಣೆಯ ನಂತರ ಕಾಂಗ್ರೆಸ್ ಭವನವಿರುವ ಇಡೀ ಪ್ರದೇಶವು ನಿರ್ಜನವಾಗಿದೆ. ಅಗರ್ತಲಾ ವಿಧಾನಸಭಾ ಕ್ಷೇತ್ರದಲ್ಲಿ ವಿಜೇತ ಅಭ್ಯರ್ಥಿ ಸುದೀಪ್ ರಾಯ್ ಬರ್ಮನ್ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮತ ಎಣಿಕೆ ಸಭಾಂಗಣದಿಂದ ಹೊರ ಹೋಗಿದ್ದರು.
ಊಟಕ್ಕೆ ತಯಾರಿ ನಡೆಸುತ್ತಿದ್ದಾಗ ಬಿಜೆಪಿ ಬೆಂಬಲಿಗರ ಗುಂಪು ಕಾಂಗ್ರೆಸ್ ಭವನದ ಮೇಲೆ ದಾಳಿ ಮಾಡಿದೆ. ತ್ರಿಪುರ ಪ್ರದೇಶ ಕಾಂಗ್ರೆಸ್ ಸಮಿತಿ(ಟಿಪಿಸಿಸಿ) ಅಧ್ಯಕ್ಷರ ತಲೆಗೆ ಇಟ್ಟಿಗೆಯಿಂದ ಹೊಡೆದಿದ್ದು, ರೋಮಿ ಮಿಯಾ ಎಂದು ಗುರುತಿಸಲಾದ ಕಾಂಗ್ರೆಸ್ ಕಾರ್ಯಕರ್ತನನ್ನು ಬಿಜೆಪಿ ಬೆಂಬಲಿಗರು ಇರಿದಿದ್ದಾರೆ ಎಂದು ಕಾಂಗ್ರೆಸ್ ಮಾಧ್ಯಮ ಉಸ್ತುವಾರಿ ಆಶಿಶ್ ಕುಮಾರ್ ಸಹಾ ಹೇಳಿದ್ದಾರೆ.
ಯುವಮೋರ್ಚಾ ಮುಖಂಡರ ನೇತೃತ್ವದಲ್ಲಿ ಬಿಜೆಪಿ ಬೆಂಬಲಿಗರು ಕಟ್ಟಡದ ಮೇಲೆ ಇಟ್ಟಿಗೆ ಮಳೆ ಸುರಿದು ಅದರ ಮುಂದೆ ನಿಲ್ಲಿಸಿದ್ದ ಹಲವು ದ್ವಿಚಕ್ರ ವಾಹನಗಳಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿದರು.