'ಮಹಾ' ರಾಜಕೀಯ: ಸದ್ಯಕ್ಕೆ ಅನರ್ಹತೆ ಭೀತಿಯಿಂದ ಶಿಂಧೆ ಬಣ ಬಚಾವ್; ಜುಲೈ 11ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ(ಎಂವಿಎ) ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತಂದಿದ್ದ ಶಿಂಧೆ ಬಣಕ್ಕೆ ಇಂದು ಸುಪ್ರೀಂ ಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ(ಎಂವಿಎ) ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತಂದಿದ್ದ ಶಿಂಧೆ ಬಣಕ್ಕೆ ಇಂದು ಸುಪ್ರೀಂ ಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ. 

ಮಹಾರಾಷ್ಟ್ರ ವಿಧಾನಸಭೆ ಉಪಸಭಾಪತಿ ನರಹರಿ ಜಿರ್ವಾಲ್ ಅವರು ತಮಗೆ ಹಾಗೂ 15 ಬಂಡಾಯ ಶಾಸಕರಿಗೆ ಕಳುಹಿಸಲಾದ ಅನರ್ಹತೆಯ ನೋಟಿಸ್ ವಿರುದ್ಧ ಶಿವಸೇನೆಯ ಬಂಡಾಯ ಸಚಿವ ಏಕನಾಥ್ ಶಿಂಧೆ ಭಾನುವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರ ರಜಾಕಾಲದ ಪೀಠವು ಅನರ್ಹತೆ ನೋಟಿಸ್‌ಗೆ ಉತ್ತರಿಸಲು 16 ಅತೃಪ್ತ ಶಾಸಕರಿಗೆ ಉಪಸಭಾಪತಿ ನೀಡಿದ ಸಮಯವನ್ನು ಜುಲೈ 11 ರವರೆಗೆ ವಿಸ್ತರಿಸಿದೆ.

ಶಿಂಧೆ ಬಣದ ಎರಡು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಜುಲೈ 11ರಂದು ಮತ್ತೆ ವಿಚಾರಣೆ ನಡೆಸುತ್ತೇವೆ. ಏತನ್ಮಧ್ಯೆ, ಮಧ್ಯಂತರ ಕ್ರಮವಾಗಿ, ಅರ್ಜಿದಾರರು ಅಥವಾ ಇತರ ಶಾಸಕರು ತಮ್ಮ ಲಿಖಿತ ಮನವಿಯನ್ನು ಸಲ್ಲಿಸಲು ಉಪಸಭಾಪತಿಯವರು ಇಂದು ಸಂಜೆ 5.30 ರವರೆಗೆ ನೀಡಿದ್ದ ಸಮಯವನ್ನು ಜುಲೈ 11ರ ಸಂಜೆ 5.30 ರವರೆಗೆ ವಿಸ್ತರಿಸಲಾಗಿದೆ.

ಏಕನಾಥ್ ಶಿಂಧೆ ಮತ್ತು ಇತರ 15 ಅತೃಪ್ತ ಶಾಸಕರು ಅನರ್ಹತೆ ನೋಟಿಸ್‌ ಕುರಿತು ದೇಶದ ಸರ್ವೋಚ್ಚ ನ್ಯಾಯಾಲಯವು, ಕೇಂದ್ರ ಸರ್ಕಾರ, ಮಹಾರಾಷ್ಟ್ರ ಉಪ ಸ್ಪೀಕರ್, ಶಿವಸೇನೆ ಮುಖ್ಯ ಸಚೇತಕ ಸುನಿಲ್ ಪ್ರಭು ಮತ್ತು ಶಾಸಕಾಂಗ ಪಕ್ಷದ ನಾಯಕ ಅನಿಲ್ ಚೌಧರಿ ಅವರಿಗೆ ನೋಟಿಸ್ ಜಾರಿ ಮಾಡಿದೆ. 

ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ, ತಮ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಅನ್ನು ಏಕೆ ಸಂಪರ್ಕಿಸಿಲ್ಲ ಎಂದು ನ್ಯಾಯಾಲಯವು ಶಿವಸೇನೆಯ ಬಂಡಾಯ ಶಾಸಕ ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ಕೇಳಿದ್ದು ಇದಕ್ಕೆ ತಮ್ಮ ಜೀವಕ್ಕೆ ಅಪಾಯವಿದ್ದು, ಮುಂಬೈನಲ್ಲಿ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಪೂರಕವಾದ ವಾತಾವರಣ ಇಲ್ಲ ಎಂದು ಶಿಂಧೆ ಬಣ ತಿಳಿಸಿದೆ.

ಶಿಂಧೆ ಮತ್ತು ಶಿವಸೇನೆಯ ಬಹುಪಾಲು ಶಾಸಕರು ಜೂನ್ 22ರಿಂದ ಅಸ್ಸಾಂನ ರಾಜಧಾನಿ ಗುವಾಹಟಿಯ ಹೋಟೆಲ್‌ನಲ್ಲಿ ಮೊಕ್ಕಾಂ ಹೂಡಿದ್ದಾರೆ. ರಾಜ್ಯದ ಎಂವಿಎ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯ ಶಾಸಕರು ಗರಂ ಆಗಿದ್ದು, ಸರ್ಕಾರ ಪತನವಾಗುವ ಭೀತಿ ಎದುರಾಗಿದೆ.

ಶಿಂಧೆ ನೇತೃತ್ವದ ಬಂಡಾಯ ಗುಂಪು ಶಿವಸೇನೆಯು ಮಹಾ ವಿಕಾಸ್ ಅಘಾಡಿ ಮೈತ್ರಿಯಿಂದ (ಎಂವಿಎ) ಹೊರಬರಲು ಒತ್ತಾಯಿಸುತ್ತಿದೆ, ಆದರೆ ಶಿವಸೇನೆ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬಿಟ್ಟುಕೊಡಲು ನಿರಾಕರಿಸಿದ್ದಾರೆ. ಅಲ್ಲದೆ ಬಂಡಾಯ ಶಾಸಕರು ತಮ್ಮ ಪಕ್ಷಕ್ಕೆ ರಾಜಿನಾಮೆ ನೀಡಿ ಸ್ಪರ್ಧಿಸುವಂತೆ ಸವಾಲು ಹಾಕಿದೆ. 

ಈ ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಒತ್ತಾಯಿಸಿ ಜೂನ್ 27ರ ಸಂಜೆಯೊಳಗೆ ಲಿಖಿತ ಉತ್ತರವನ್ನು ಕೋರಿ ಮಹಾರಾಷ್ಟ್ರ ಅಸೆಂಬ್ಲಿ ಸೆಕ್ರೆಟರಿಯೇಟ್ ಕಳೆದ ಶನಿವಾರ 16 ಬಂಡಾಯ ಶಾಸಕರಿಗೆ 'ಸಮನ್ಸ್' ಜಾರಿ ಮಾಡಿತ್ತು. ಮಹಾರಾಷ್ಟ್ರ ವಿಧಾನ ಭವನದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಭಾಗವತ್ ಅವರು ಸಹಿ ಮಾಡಿರುವ ಶಿವಸೇನೆ ಮುಖ್ಯ ಸಚೇತಕ ಸುನೀಲ್ ಪ್ರಭು ಅವರು ನಾಮನಿರ್ದೇಶನ ಮಾಡಿರುವ ಪತ್ರದಲ್ಲಿ ಎಲ್ಲಾ 16 ಶಾಸಕರಿಗೆ ಸಮನ್ಸ್ ಕಳುಹಿಸಲಾಗಿತ್ತು.

ಶಿವಸೇನೆಯ ಮೂರನೇ ಎರಡರಷ್ಟು ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿರುವ ಶಿಂಧೆ ಬಣ, ಪ್ರಭು ಬದಲಿಗೆ ಭರತ್ ಗೊಗವಾಲೆ ಅವರನ್ನು ಪಕ್ಷದ ವಿಪ್ ಆಗಿ ನೇಮಿಸಲಾಗಿದೆ ಎಂದು ವಾದಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com