ಬಿಜೆಪಿ ಸೇರಲು ಅಮರಿಂದರ್ ಸಿಂಗ್ ಸಿದ್ಧತೆ, ಕೇಸರಿ ಪಕ್ಷದೊಂದಿಗೆ ಪಂಜಾಬ್ ಲೋಕ ಕಾಂಗ್ರೆಸ್ ವಿಲೀನ
ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೇಂದರ್ ಸಿಂಗ್ ಅವರು ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದು, ತಮ್ಮ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷವನ್ನು ಕೇಸರಿ ಪಕ್ಷದೊಂದಿಗೆ ವಿಲೀನಗೊಳಿಸಲು ಮುಂದಾಗಿದ್ದಾರೆ.
Published: 30th June 2022 10:26 PM | Last Updated: 01st July 2022 01:17 PM | A+A A-

ಪಂಜಾಬ್ ನ ಮಾಜಿ ಸಿಎಂ ಅಮರಿಂದರ್ ಸಿಂಗ್
ನವದೆಹಲಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೇಂದರ್ ಸಿಂಗ್ ಅವರು ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದು, ತಮ್ಮ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷವನ್ನು ಕೇಸರಿ ಪಕ್ಷದೊಂದಿಗೆ ವಿಲೀನಗೊಳಿಸಲು ಮುಂದಾಗಿದ್ದಾರೆ.
ಅಮರಿಂದರ್ ಸಿಂಗ್ ಅವರು ಸದ್ಯ ಲಂಡನ್ ನಲ್ಲಿ ಬೆನ್ನಿನ ಶಸ್ತ್ರಚಿಕಿತ್ಸಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದು, ಮುಂದಿನ ವಾರದ ಕೊನೆಯಲ್ಲಿ ಭಾರತಕ್ಕೆ ಮರಳುವ ಸಾಧ್ಯತೆಯಿದೆ. ಲಂಡನ್ ನಿಂದ ಆಗಮಿಸಿದ ನಂತರ ಬಿಜೆಪಿ ಸೇರ್ಪಡೆಯ ಪ್ರಕ್ರಿಯೆಯು ಪ್ರಾರಂಭವಾಗಲಿದೆ.
ಅಮರಿಂದರ್ ಸಿಂಗ್ ಅವರು ಕಳೆದ ವರ್ಷ ಕಾಂಗ್ರೆಸ್ ತಮ್ಮನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆಗೆದುಹಾಕಿದ ನಂತರ ಕಾಂಗ್ರೆಸ್ ತೊರೆದು ಪಂಜಾಬ್ ಲೋಕ ಕಾಂಗ್ರೆಸ್ ಎಂಬ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದರು. ಈಗ ತಮ್ಮ ಹೊಸ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ: ಕಾಂಗ್ರೆಸ್ ನಾಯಕತ್ವ ಬುದ್ದಿ ಕಲಿಯಲ್ಲ: ರಾಹುಲ್ ಗಾಂಧಿ ವಿರುದ್ಧ ಕ್ಯಾಪ್ಟನ್ ಅಮರೀಂದರ್ ಸಿಂಗ್ ವಾಗ್ದಾಳಿ
ಆದರೆ ಕೇಂದ್ರದ ಮಾಜಿ ಸಚಿವೆ ಹಾಗೂ ಪಟಿಯಾಲದ ಹಾಲಿ ಸಂಸದೆಯಾಗಿರುವ ಅಮರಿಂದರ್ ಸಿಂಗ್ ಅವರ ಪತ್ನಿ ಪ್ರಣೀತ್ ಕೌರ್ ಅವರಿಗೆ ಅವಕಾಶ ಕಲ್ಪಿಸುವುದು ಹೇಗೆ ಎಂಬುದು ಬಿಜೆಪಿಯ ಮುಂದಿರುವ ಪ್ರಮುಖ ಸವಾಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಣೀತ್ ಕೌರ್ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿ ಪಡೆದು ತಮ್ಮ ಮಗಳು ಜೈ ಇಂದರ್ ಕೌರ್ ಅವರಿಗೆ ತಮ್ಮ ಕ್ಷೇತ್ರವನ್ನು ಬಿಟ್ಟುಕೊಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಬಿಜೆಪಿ ಜೈ ಇಂದರ್ ಕೌರ್ ಅವರಿಗೆ ಪಟಿಯಾಲ ಲೋಕಸಭಾ ಟಿಕೆಟ್ ನೀಡುವ ಭರವಸೆ ನೀಡಬೇಕೆಂದು ಅವರು ಬಯಸುತ್ತಿದ್ದಾರೆ ಎನ್ನಲಾಗಿದೆ.