ಉತ್ತರ ಪ್ರದೇಶ ಜನ ಜಾತಿ, ಧರ್ಮ ರಾಜಕೀಯದ ಸಮಾಧಿ ಮಾಡಿದ್ದಾರೆ: ಯೋಗಿ ವಿಜಯೋತ್ಸವ ಭಾಷಣ

ಪಂಚರಾಜ್ಯ ಚುನಾವಣೆಯಲ್ಲಿ ಎಲ್ಲರ ದೃಷ್ಟಿ ನೆಟ್ಟಿದ್ದು ಉತ್ತರ ಪ್ರದೇಶದ ಫಲಿತಾಂಶದತ್ತ. ಏಕೆಂದರೆ ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದಲೂ ಹಿಡಿದು ಇಂದಿನವರೆಗೂ ಬಿಜೆಪಿ, ಸಮಾಜವಾದಿ ಪಕ್ಷ, ಬಹಜನ ಸಮಾಜ ಪಕ್ಷ, ಕಾಂಗ್ರೆಸ್ ಪಕ್ಷಗಳ...
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

ಲಖನೌ: ಪಂಚರಾಜ್ಯ ಚುನಾವಣೆಯಲ್ಲಿ ಎಲ್ಲರ ದೃಷ್ಟಿ ನೆಟ್ಟಿದ್ದು ಉತ್ತರ ಪ್ರದೇಶದ ಫಲಿತಾಂಶದತ್ತ. ಏಕೆಂದರೆ ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದಲೂ ಹಿಡಿದು ಇಂದಿನವರೆಗೂ ಬಿಜೆಪಿ, ಸಮಾಜವಾದಿ ಪಕ್ಷ, ಬಹಜನ ಸಮಾಜ ಪಕ್ಷ, ಕಾಂಗ್ರೆಸ್ ಪಕ್ಷಗಳ ನಡುವೆ ಜಿದ್ದಾ ಜಿದ್ದಿ ನಡೆಯುತ್ತಲೇ ಇತ್ತು. ಕೋವಿಡ್ ನಿಯಮಾವಳಿಗಳ ನಡುವೆಯೂ ಕೈಗೊಂಡಿದ್ದ ಪ್ರಚಾರ, ನೀಡಿದ್ದ ಭರವಸೆಗಳು ಕಡಿಮೆ ಏನಿಲ್ಲ. ಲೋಪದೋಷಗಳು, ಗುಣಗಾನಗಳ ನಡುವೆ ಸಾಗಿದ ಪ್ರಚಾರ ಜನರು ಯಾವ ಪಕ್ಷ ಉತ್ತಮ ಎಂದು ನಿರ್ಧರಿಸುವುದಾಗಿತ್ತು.

ಬಿಜೆಪಿ ಬರುವುದಕ್ಕೂ ಮೊದಲೇ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇರಲಿಲ್ಲ, ರಾಜ್ಯದ ಅಭಿವೃದ್ಧಿ ಆಗಿರಲಿಲ್ಲ ಎಂದು ಹೇಳುತ್ತಾ ಮೋದಿ ಅವರು ಕೋಟ್ಯಾಂತರ ರೂಪಾಯಿಗಳ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದರು. ಕೊನೆಗೂ ಈ ಬಾರಿಯ ಚುನಾವಣೆಯಲ್ಲಿ ಪುನಃ ಬಿಜೆಪಿಗೆ ಅಧಿಕಾರ ಒಲಿದಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್ ಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇಂದು ಇಲ್ಲಿ ವಿಜಯಶಾಲಿಯಾಗಿದ್ದಾರೆ. ಈ ಮೂಲಕ ಎರಡನೇ ಬಾರಿ ಮುಖ್ಯಮಂತ್ರಿಯಾಗುತ್ತಿದ್ದಾರೆ.

ಫಲಿತಾಂಶದ ಬಳಿಕ ಲಖನೌದಲ್ಲಿ ಬಿಜೆಪಿ ಕಚೇರಿಯಲ್ಲಿ ಬೆಂಬಲಿಗರು, ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್ ಅವರು, ಈ ಗೆಲುವು ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ಗೆಲುವಾಗಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮುನ್ನಡೆಸಿದೆ. ಕೊರೋನಾ ಸಮಯದಲ್ಲೂ ಪ್ರಧಾನಿ ಮೋದಿ ವಿಶ್ರಾಂತಿ ಪಡೆಯಲಿಲ್ಲ. ಈ ಗೆಲುವು ಪ್ರಧಾನಿ ಮೋದಿಯವರ ನಿರಂತರ ಪರಿಶ್ರಮದ ಫಲ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಭರ್ಜರಿ ಗೆಲುವು ಸಾಧಿಸುವ ಮೂಲಕ ಜನರು ಜಾತಿ ಮತ್ತು ಧರ್ಮದ ರಾಜಕೀಯವನ್ನು ಸಮಾಧಿ ಮಾಡಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಕೊರೋನಾ ವೈರಸ್ ನಡುವೆಯೂ ಪ್ರಜಾಪ್ರಭುತ್ವದ ಹಬ್ಬವನ್ನು ನಡೆಸುತ್ತಿರುವ ಭಾರತದ ಚುನಾವಣಾ ಆಯೋಗವನ್ನು ನಾನು ಅಭಿನಂದಿಸುತ್ತೇನೆ ಮತ್ತು ಧನ್ಯವಾದ ಹೇಳಲು ಬಯಸುತ್ತೇನೆ. ಇನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಉತ್ತರ ಪ್ರದೇಶದಲ್ಲಿ ಭಾರಿ ಜನಾದೇಶವನ್ನು ಗಳಿಸಿವೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಇಂದು ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಬಹುಮತ ಗಳಿಸಿದೆ. ಮತದಾರರು ಮೋದಿ-ಜಿಯವರ ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ನೀತಿಗಳನ್ನು ಆಶೀರ್ವದಿಸಿದ್ದಾರೆ ಎಂದು ಹೇಳಿದರು.

ಯುಪಿಯ 403 ಸ್ಥಾನಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 250ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com