ಹೈಪರ್‌ಸಾನಿಕ್ ಆಯುಧಗಳು ಎಂದರೇನು? ಅವು ಎಷ್ಟರ ಮಟ್ಟಿಗೆ ಕ್ರಾಂತಿಕಾರಕ?
ಹೈಪರ್‌ಸಾನಿಕ್ ಆಯುಧಗಳು ಅತ್ಯಂತ ಕುಶಲವಾಗಿ ಚಲಿಸಬಲ್ಲ ಆಯುಧಗಳಾಗಿದ್ದು, ಇವುಗಳು ಮ್ಯಾಕ್ 5 ವೇಗದಲ್ಲಿ (ಶಬ್ದದ ವೇಗಕ್ಕಿಂತ 5 ಪಟ್ಟು ಹೆಚ್ಚು, ಅಂದಾಜು ಗಂಟೆಗೆ 6,000 ಕಿಲೋಮೀಟರ್) ಸಾಗಬಲ್ಲವು.
Published: 04th November 2022 06:23 PM | Last Updated: 04th November 2022 06:46 PM | A+A A-

ಬ್ರಹ್ಮೋಸ್ ಕ್ಷಿಪಣಿ
- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ವಿವಿಧ ರಾಷ್ಟ್ರಗಳು ಈಗಾಗಲೇ ಹೈಪರ್‌ಸಾನಿಕ್ ಆಯುಧಗಳನ್ನು ಅಭಿವೃದ್ಧಿಪಡಿಸಲು ಶ್ರಮ ವಹಿಸುತ್ತಿರುವ ಕುರಿತು ಈಗಾಗಲೇ ಚರ್ಚೆಗಳು ನಡೆಯುತ್ತಿವೆ. ಹೈಪರ್‌ಸಾನಿಕ್ ಆಯುಧಗಳನ್ನು ಭವಿಷ್ಯದ ಗೇಮ್ ಚೇಂಜರ್ ಎಂದೇ ಪರಿಗಣಿಸಲಾಗುತ್ತಿದೆ. ಆದರೆ ಈ ಹೈಪರ್‌ಸಾನಿಕ್ ಆಯುಧಗಳು ಎಂದರೇನು? ಅವುಗಳು ಎಷ್ಟರ ಮಟ್ಟಿಗೆ ಕ್ರಾಂತಿಕಾರಕವಾಗಿವೆ?
ಹೈಪರ್‌ಸಾನಿಕ್ ಆಯುಧಗಳು
ಹೈಪರ್‌ಸಾನಿಕ್ ಆಯುಧಗಳು ಅತ್ಯಂತ ಕುಶಲವಾಗಿ ಚಲಿಸಬಲ್ಲ ಆಯುಧಗಳಾಗಿದ್ದು, ಇವುಗಳು ಮ್ಯಾಕ್ 5 ವೇಗದಲ್ಲಿ (ಶಬ್ದದ ವೇಗಕ್ಕಿಂತ 5 ಪಟ್ಟು ಹೆಚ್ಚು, ಅಂದಾಜು ಗಂಟೆಗೆ 6,000 ಕಿಲೋಮೀಟರ್) ಸಾಗಬಲ್ಲವು. ಅವುಗಳು ಹಾರಾಟದ ಸಂದರ್ಭದಲ್ಲೇ ತಮ್ಮ ಪಥವನ್ನು ಬದಲಾಯಿಸಬಲ್ಲವು. ಆದರೆ ಹೈಪರ್‌ಸಾನಿಕ್ ಕ್ಷಿಪಣಿಗಳು ಹೈಪರ್‌ಸಾನಿಕ್ ವೇಗದಲ್ಲಿ ಚಲಿಸಬಲ್ಲ, ಆದರೆ ನಿಗದಿತ ಕೌಶಲ್ಯ ಮತ್ತು ನಿರ್ದಿಷ್ಠ ಪಥದಲ್ಲಷ್ಟೇ ಚಲಿಸಬಲ್ಲ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ಭಿನ್ನವಾಗಿವೆ.
ಹೈಪರ್‌ಸಾನಿಕ್ ಆಯುಧಗಳ ವಿಧಗಳು
ಹೈಪರ್‌ಸಾನಿಕ್ ಆಯುಧಗಳಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ. ಅವುಗಳೆಂದರೆ ಹೈಪರ್‌ಸಾನಿಕ್ ಗ್ಲೈಡ್ ವೆಹಿಕಲ್ ಮತ್ತು ಹೈಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳು. ಹೈಪರ್‌ಸಾನಿಕ್ ಗ್ಲೈಡ್ ವೆಹಿಕಲ್‌ಗಳನ್ನು ರಾಕೆಟ್ ಮೂಲಕ ಉಡಾಯಿಸಲಾಗುತ್ತದೆ. ಅದು ಬಳಿಕ ರಾಕೆಟ್‌ನಿಂದ ಬೇರ್ಪಟ್ಟು, ಬಳಿಕ ಕನಿಷ್ಠ ಮ್ಯಾಕ್ 5 ವೇಗದಲ್ಲಿ ತನ್ನ ಗುರಿಯೆಡೆಗೆ ಸಾಗುತ್ತದೆ. ಇನ್ನೊಂದೆಡೆ ಹೈಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳು ಅಪಾರ ವೇಗದ ಏರ್ ಬ್ರೀದಿಂಗ್ ಇಂಜಿನ್‌ಗಳನ್ನು ಹೊಂದಿವೆ.
ಹೈಪರ್‌ಸಾನಿಕ್ ಆಯುಧಗಳ ಮಹತ್ವ
ಅತ್ಯಂತ ಕುಶಲವಾದ ಆಯುಧಗಳನ್ನು ಹೈಪರ್‌ಸಾನಿಕ್ ವೇಗದಲ್ಲಿ ಉಡಾವಣೆಗೊಳಿಸುವುದು ಪ್ರಸ್ತುತ ಬಳಕೆಯಲ್ಲಿರುವ ಎಂತಹ ರಕ್ಷಣಾ ವ್ಯವಸ್ಥೆಯನ್ನೂ ಧ್ವಂಸಗೊಳಿಸಬಲ್ಲದು. ಇದು ಯಾವುದೇ ದೇಶಕ್ಕಾದರೂ ಅಪಾರ ಮೇಲುಗೈ ಒದಗಿಸುತ್ತದೆ.
ಇದನ್ನೂ ಓದಿ: ಅಗ್ನಿ ಪ್ರೈಮ್ ಪರೀಕ್ಷೆ ಯಶಸ್ವಿ: ಈ ಬ್ಯಾಲಿಸ್ಟಿಕ್ ಕ್ಷಿಪಣಿಯ ವಿಶೇಷತೆಗಳೇನು?
ಜನವರಿ 2020ರಲ್ಲಿ, ಅಮೆರಿಕಾದ ಜಾಯಿಂಟ್ ಚೀಫ್ ಆಫ್ ಸ್ಟಾಫ್ ಆದ ಜನರಲ್ ಜಾನ್ ಹೈಟನ್ ಅವರು "ಅಪಾಯ ಏನೇ ಆದರೂ, ನಿಮಗೆ ಅದನ್ನು ನೋಡಲು ಸಾಧ್ಯವಿಲ್ಲ ಎಂದರೆ ನೀವು ಅದರ ವಿರುದ್ಧ ಗೆಲ್ಲಲೂ ಸಾಧ್ಯವಿಲ್ಲ" ಎಂದಿದ್ದರು.
ಅಮೆರಿಕನ್ ಅಧಿಕಾರಿಗಳ ಪ್ರಕಾರ, ಕೆಲವು ನೆಲದ ಆಧಾರಿತ ರೇಡಾರ್‌ಗಳು ಹೈಪರ್‌ಸಾನಿಕ್ ಆಯುಧಗಳನ್ನು ಗುರುತಿಸಬಲ್ಲವು. ಆದರೆ ಅವುಗಳು ದಾಳಿ ನಡೆಯುತ್ತಿದೆ ಎಂದು ಎಚ್ಚರಿಕೆ ನೀಡಲು ಸಮರ್ಥವಾಗಿಲ್ಲ. ಆದ್ದರಿಂದ ಆಕಾಶ ಆಧಾರಿತ ರೇಡಾರ್ ವ್ಯವಸ್ಥೆಗಳ ನಿರ್ಮಾಣವಾಗಬೇಕೆಂದು ಹೈಟನ್ ಥರದ ಅಧಿಕಾರಿಗಳು ಬಯಸುತ್ತಿದ್ದಾರೆ.
ಹೈಪರ್‌ಸಾನಿಕ್ ಆಯುಧಗಳನ್ನು ಅಭಿವೃದ್ಧಿ ಪಡಿಸುತ್ತಿರುವ ರಾಷ್ಟ್ರಗಳು
ಅಮೆರಿಕಾ ಸಂಯುಕ್ತ ಸಂಸ್ಥಾನ, ಚೀನಾ, ರಷ್ಯಾಗಳು ಪ್ರಸ್ತುತ ಹೈಪರ್‌ಸಾನಿಕ್ ಆಯುಧಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿವೆ. ಇನ್ನಷ್ಟು ರಾಷ್ಟ್ರಗಳು ಇದರ ಕುರಿತು ಸಂಶೋಧನೆಗಳನ್ನು ನಡೆಸುತ್ತಿವೆ. ಇನ್ನೂ ಕೆಲವು ರಾಷ್ಟ್ರಗಳು ನಾವು ಈ ಆಯುಧಗಳನ್ನು ಪರೀಕ್ಷಿಸುತ್ತಿದ್ದೇವೆ ಎಂದಿವೆ.
ಅಮೆರಿಕಾ
2022ರ ಹಣಕಾಸು ವರ್ಷದಲ್ಲಿ ಅಮೆರಿಕಾ ಸೇನೆ ಹೈಪರ್‌ಸಾನಿಕ್ ಆಯುಧಗಳ ಅಭಿವೃದ್ಧಿಗಾಗಿ 3.8 ಬಿಲಿಯನ್ ಡಾಲರ್ ಹಣಕ್ಕಾಗಿ ಬೇಡಿಕೆ ಸಲ್ಲಿಸಿದೆ. ಅದರೊಡನೆ 246.9 ಮಿಲಿಯನ್ ಡಾಲರ್ ಮೊತ್ತವನ್ನು ಹೈಪರ್‌ಸಾನಿಕ್ ರಕ್ಷಣಾ ಸಂಶೋಧನೆಗಾಗಿ ಅಪೇಕ್ಷಿಸುತ್ತಿದೆ. ಅಮೆರಿಕದ ಬಹುತೇಕ ಹೈಪರ್‌ಸಾನಿಕ್ ಆಯುಧಗಳು ಪ್ರಸ್ತುತ ಅಭಿವೃದ್ಧಿ ಹಂತದಲ್ಲಿ ಅಥವಾ ಪರೀಕ್ಷಾ ಹಂತದಲ್ಲಿವೆ. ಅವುಗಳಲ್ಲಿ ಕನಿಷ್ಠ ಒಂದು ವ್ಯವಸ್ಥೆಯಾದರೂ ಈ ವರ್ಷದಲ್ಲಿ ಕಾರ್ಯಾಚರಣೆಯ ಹಂತ ತಲುಪುವ ನಿರೀಕ್ಷೆಯಿದೆ. ಈ ಆಯುಧಗಳು ಸಾಂಪ್ರದಾಯಿಕ ಸಿಡಿತಲೆಗಳನ್ನು ಬಳಸಿಕೊಳ್ಳುತ್ತವೆ.
ಚೀನಾ
ಅಮೆರಿಕಾದ ಅಧಿಕಾರಿಗಳ ಪ್ರಕಾರ, ಚೀನಾ ಪ್ರಸ್ತುತ ಹೈಪರ್‌ಸಾನಿಕ್ ಗ್ಲೈಡ್ ವೆಹಿಕಲ್‌ಗಳು ಮತ್ತು ಹೈಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಹೈಪರ್‌ಸಾನಿಕ್ ಗ್ಲೈಡ್ ವೆಹಿಕಲ್ ಒಯ್ಯಬಲ್ಲ ಕನಿಷ್ಠ ಒಂದು ಕ್ಷಿಪಣಿಯಾದರೂ ಚೀನಾ ಬಳಿ ಬಳಕೆಯಲ್ಲಿರಬಹುದು ಎನ್ನಲಾಗುತ್ತದೆ. 2016ರಿಂದ 2021ರ ಮಧ್ಯ ಚೀನಾ ಹಲವಾರು ಹೈಪರ್‌ಸಾನಿಕ್ ಆಯುಧಗಳ ಪರೀಕ್ಷೆ ನಡೆಸಿರಬಹುದು ಎನ್ನಲಾಗುತ್ತದೆ.
ರಷ್ಯಾ
ಪಾಶ್ಚಾತ್ಯ ಮಿಲಿಟರಿ ಅಧಿಕಾರಿ ಒಬ್ಬರ ಪ್ರಕಾರ, ರಷ್ಯಾ 1980ರ ದಶಕದಿಂದಲೂ ಹೈಪರ್‌ಸಾನಿಕ್ ಆಯುಧ ತಂತ್ರಜ್ಞಾನ ಗಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಇತ್ತೀಚೆಗೆ ರಷ್ಯಾ ಯುದ್ಧದಲ್ಲಿ ಹೈಪರ್‌ಸಾನಿಕ್ ಆಯುಧ ಪ್ರಯೋಗಿಸಿದ ಪ್ರಥಮ ರಾಷ್ಟ್ರ ಎನಿಸಿಕೊಂಡಿದ್ದು, ಉಕ್ರೇನ್ ಮೇಲೆ ಕನಿಷ್ಠ ಒಂದು ಅಂತಹಾ ಕ್ಷಿಪಣಿಯನ್ನು ಪ್ರಯೋಗಿಸಿದೆ. ಮಾರ್ಚ್ 19ರಂದು ರಷ್ಯಾದ ಮಿಲಿಟರಿ ಅಧಿಕಾರಿಗಳು ತಾವು ಇದೇ ಮೊದಲ ಬಾರಿಗೆ ಉಕ್ರೇನ್ ಮೇಲೆ ಹೈಪರ್‌ಸಾನಿಕ್ ಕ್ಷಿಪಣಿ ದಾಳಿ ನಡೆಸಿದ್ದು, ಇದನ್ನು ಒಂದು ಭೂಗತ ಆಯುಧ ಸಂಗ್ರಹಾಗಾರವನ್ನು ಗುರಿಯಾಗಿಸಿ ನಡೆಸಲಾಗಿದೆ ಎಂದಿದ್ದರು. ರಷ್ಯಾ ಪ್ರಯೋಗಿಸಿದ ಕ್ಷಿಪಣಿ ಅದರ ಕಿಂಜ಼ಾಲ್ ಮಾದರಿಯ ಕ್ಷಿಪಣಿಯಾಗಿದ್ದು, ಅದನ್ನು ಒಂದು ಮಿಲಿಟರಿ ಜೆಟ್ ಮೂಲಕ ಪ್ರಯೋಗಿಸಲಾಗಿತ್ತು. ರಷ್ಯಾ ಒಂದು ಹೈಪರ್‌ಸಾನಿಕ್ ಗ್ಲೈಡ್ ವೆಹಿಕಲ್ ಅನ್ನೂ ಹೊಂದಿದ್ದು, ಅದನ್ನು ಅವಂಗಾರ್ಡ್ ಎಂದು ಕರೆಯಲಾಗುತ್ತದೆ. ಇದನ್ನು 2019 ಡಿಸೆಂಬರ್‌ನಲ್ಲಿ ಪ್ರಯೋಗಿಸಲಾಗಿತ್ತು. ರಷ್ಯಾ ಪ್ರಸ್ತುತ ನೌಕೆ ಆಧಾರಿತವಾದ ಹೈಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯಾದ ತ್ಸಿರ್ಕಾನ್ ಅನ್ನೂ ಅಭಿವೃದ್ಧಿ ಪಡಿಸುತ್ತಿದೆ.
ಉತ್ತರ ಕೊರಿಯಾ
ಉತ್ತರ ಕೊರಿಯಾದ ಸರ್ಕಾರಿ ಪ್ರಾಯೋಜಿತ ಕೊರಿಯಾ ಸೆಂಟ್ರಲ್ ನ್ಯೂಸ್ ಏಜೆನ್ಸಿ ಸಂಸ್ಥೆಯ ಪ್ರಕಾರ, ಉತ್ತರ ಕೊರಿಯಾ ಈಗಾಗಲೇ ಈ ವರ್ಷದಲ್ಲಿ ಎರಡು ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪ್ರಯೋಗಿಸಿದೆ. ಒಂದು ಕ್ಷಿಪಣಿಯನ್ನು ಜನವರಿ 5ರಂದು ಪ್ರಯೋಗಿಸಿದರೆ, ಇನ್ನೊಂದನ್ನು ಜನವರಿ 11ರಂದು ಪ್ರಯೋಗಿಸಲಾಯಿತು. ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಈ ಹೈಪರ್‌ಸಾನಿಕ್ ಕ್ಷಿಪಣಿಗಳು ಆತನ ರಾಷ್ಟ್ರವನ್ನು ಅಣ್ವಸ್ತ್ರ ಯುದ್ಧ ನಿರೋಧಕವಾಗಿ ರೂಪಿಸುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ. ಆದರೆ ಹಲವು ವಿಶ್ಲೇಷಕರ ಪ್ರಕಾರ ಈ ಆಯುಧ ಸಾಧ್ಯತೆ ದಕ್ಷಿಣ ಕೊರಿಯಾಗೆ ತೊಂದರೆ ಉಂಟು ಮಾಡುತ್ತದೆ.
ಇತರ ರಾಷ್ಟ್ರಗಳು
ಭಾರತ, ಜರ್ಮನಿ, ಆಸ್ಟ್ರೇಲಿಯಾ, ಫ್ರಾನ್ಸ್ ಹಾಗೂ ಜಪಾನ್‌ಗಳು ಪ್ರಸ್ತುತ ಹೈಪರ್‌ಸಾನಿಕ್ ಆಯುಧ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿವೆ. ಇಸ್ರೇಲ್, ದಕ್ಷಿಣ ಕೊರಿಯಾ ಹಾಗೂ ಇರಾನ್‌ಗಳು ಹೈಪರ್‌ಸಾನಿಕ್ ಆಯುಧಗ ಕುರಿತು 'ಫೌಂಡೇಶನ್ ರಿಸರ್ಚ್' ಎಂದು ಕರೆಯಲಾದ ಸಂಶೋಧನೆಯನ್ನು ನಡೆಸುತ್ತಿವೆ.
