ದೆಹಲಿಯಲ್ಲಿ ತಗ್ಗಿದ ಮಾಲಿನ್ಯ: ನ. 9 ರಿಂದ ಶಾಲೆಗಳು ಪುನರಾರಂಭ, ಮನೆಯಿಂದ ಕೆಲಸ ಆದೇಶ ವಾಪಸ್
ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಕಡಿಮೆಯಾಗಿರುವುದನ್ನು ಗಮನದಲ್ಲಿಟ್ಟುಕೊಂಡು ನವೆಂಬರ್ 9 ರಿಂದ ಪ್ರಾಥಮಿಕ ಶಾಲೆಗಳನ್ನು ಪುನರಾರಂಭಿಸಲು ಮತ್ತು ಶೇಕಡಾ 50 ರಷ್ಟು ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡಬೇಕು...
Published: 07th November 2022 04:17 PM | Last Updated: 07th November 2022 04:17 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಕಡಿಮೆಯಾಗಿರುವುದನ್ನು ಗಮನದಲ್ಲಿಟ್ಟುಕೊಂಡು ನವೆಂಬರ್ 9 ರಿಂದ ಪ್ರಾಥಮಿಕ ಶಾಲೆಗಳನ್ನು ಪುನರಾರಂಭಿಸಲು ಮತ್ತು ಶೇಕಡಾ 50 ರಷ್ಟು ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡಬೇಕು ಎಂಬ ತನ್ನ ಆದೇಶವನ್ನು ಹಿಂಪಡೆಯಲು ದೆಹಲಿ ಸರ್ಕಾರ ಸೋಮವಾರ ನಿರ್ಧರಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಪರಿಸರ ಸಚಿವ ಗೋಪಾಲ್ ರೈ ಅವರು, ದೆಹಲಿಯಲ್ಲಿ ವಾಯು ಮಾಲಿನ್ಯ ಪರಿಸ್ಥಿತಿಯಲ್ಲಿ ತ್ವರಿತ ಸುಧಾರಣೆ ಕಂಡುಬಂದಿದೆ ಮತ್ತು ಕೃಷಿ ತ್ಯಾಜ್ಯ ಸುಡುವುದು ಸಹ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.
ವಾಯು ಗುಣಮಟ್ಟ ನಿರ್ವಹಣಾ ಆಯೋಗದ ನಿರ್ದೇಶನವನ್ನು ಅನುಸರಿಸಿ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್‌ನ 4ನೇ ಹಂತದ ಅಡಿಯಲ್ಲಿ ವಿಧಿಸಲಾದ ನಿರ್ಬಂಧಗಳನ್ನು ತೆಗೆದುಹಾಕಲು ದೆಹಲಿ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ: ದೆಹಲಿ ಮಾಲಿನ್ಯ: ವಾಯು ಗುಣಮಟ್ಟ ಎಕ್ಯುಐ ಮೀಟರ್ ನಲ್ಲಿ 326 ದಾಖಲು, ಮುಂದಿನ ದಿನಗಳಲ್ಲಿ ಮತ್ತಷ್ಟು ಹದಗೆಡುವ ಸಾಧ್ಯತೆ
"ನವೆಂಬರ್ 9 ರಿಂದ ಪ್ರಾಥಮಿಕ ಶಾಲೆಗಳು ಪುನರಾರಂಭಗೊಳ್ಳಲಿವೆ ಮತ್ತು ಶೇಕಡಾ 50 ರಷ್ಟು ಸರ್ಕಾರಿ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ನೀಡಿದ್ದ ಆದೇಶವನ್ನು ಹಿಂಪಡೆಯಲಾಗುತ್ತಿದೆ" ಎಂದು ಸಚಿವರು ಹೇಳಿದ್ದಾರೆ.
ಕಳೆದ ಎರಡು ದಿನಗಳಿಂದ ದೆಹಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯ ಪ್ರಮಾಣ ಕಡಿಮೆಯಾಗುತ್ತಿದ್ದಂತೆ, ಈ ಪ್ರದೇಶದಲ್ಲಿ ಬಿಎಸ್ VI ಅಲ್ಲದ ಡೀಸೆಲ್ ಲೈಟ್ ಮೋಟಾರು ವಾಹನಗಳ ಸಂಚಾರ ಮತ್ತು ರಾಜಧಾನಿಗೆ ಟ್ರಕ್‌ಗಳ ಪ್ರವೇಶದ ಮೇಲಿನ ನಿಷೇಧವನ್ನು ತೆಗೆದುಹಾಕುವಂತೆ ಕೇಂದ್ರ ವಾಯು ಗುಣಮಟ್ಟ ಸಮಿತಿ ಭಾನುವಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.