ಮಿಲಿಟರಿ ಸ್ನೈಪರ್‌ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?
ಸ್ನೈಪರ್ ಎಂದರೆ ಅತ್ಯಂತ ಉನ್ನತ ಮಟ್ಟದ ತರಬೇತಿ ಪಡೆದ ಸೈನಿಕನಾಗಿದ್ದು, ಅತ್ಯಂತ ದೂರದಿಂದಲೇ ಮಾರ್ಪಡಿತ ರೈಫಲ್‌ಗಳನ್ನು ಬಳಸಿ, ಗುರಿಯಿಟ್ಟು ಗುಂಡು ಹಾರಿಸಲು ಸಮರ್ಥನಾಗಿರುತ್ತಾನೆ.
Published: 09th November 2022 07:06 PM | Last Updated: 09th November 2022 07:06 PM | A+A A-

ಭಾರತೀಯ ಸೇನೆಯ ಸ್ನೈಪರ್ (ಸಂಗ್ರಹ ಚಿತ್ರ)
- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಸ್ನೈಪರ್ ಎಂದರೆ ಅತ್ಯಂತ ಉನ್ನತ ಮಟ್ಟದ ತರಬೇತಿ ಪಡೆದ ಸೈನಿಕನಾಗಿದ್ದು, ಅತ್ಯಂತ ದೂರದಿಂದಲೇ ಮಾರ್ಪಡಿತ ರೈಫಲ್‌ಗಳನ್ನು ಬಳಸಿ, ಗುರಿಯಿಟ್ಟು ಗುಂಡು ಹಾರಿಸಲು ಸಮರ್ಥನಾಗಿರುತ್ತಾನೆ. ಅವರು ಯಾರ ಕಣ್ಣಿಗೂ ಕಾಣದಂತೆ, ಸ್ಟೆಲ್ತ್ ರೀತಿಯನ್ನು ಅನುಸರಿಸಬಲ್ಲವರಾಗಿದ್ದು, ಕ್ಯಾಮಫ್ಲೇಜ್, ನುಸುಳುವಿಕೆ ಹಾಗೂ ಗಮನಿಸುವಿಕೆಯಲ್ಲಿ ನಿಪುಣರಾಗಿರುತ್ತಾರೆ.
ಯುದ್ಧ ರಂಗದಲ್ಲಿ ಮಿಲಿಟರಿ ಸ್ನೈಪರ್‌ಗಳನ್ನು ವಿವಿಧ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತದೆ. ಸ್ನೈಪರ್‌ಗಳ ಪ್ರಾಥಮಿಕ ಕಾರ್ಯವೆಂದರೆ ಗುಂಡು ಹಾರಿಸುವುದಷ್ಟೇ ಅಲ್ಲ. ಅವರು ಸ್ಟೆಲ್ತ್ ರೂಪದಲ್ಲಿ ಚಲಿಸಬಲ್ಲವರಾದ್ದರಿಂದ, ಅವರು ಶತ್ರು ಪ್ರದೇಶಕ್ಕೂ ನುಸುಳಿ, ಶತ್ರುವಿನ ಗಾತ್ರ, ಸಾಮರ್ಥ್ಯ ಮತ್ತು ಸರಿಯಾದ ಪ್ರದೇಶಗಳ ಕುರಿತಾದ ಮಾಹಿತಿಯನ್ನೂ ಒದಗಿಸಬಲ್ಲರು.
ಕಾರ್ಯಾಚರಣೆಯ ಸಂದರ್ಭದಲ್ಲಿ ಏನಾದರೂ ಅಗತ್ಯ ಬಿದ್ದರೆ, ಸ್ನೈಪರ್‌ಗಳು ಶತ್ರುಗಳ ಮೇಲೆ ಅನಿರೀಕ್ಷಿತ ರೈಫಲ್ ದಾಳಿ ನಡೆಸಿ, ಕಂಗಾಲಾಗುವಂತೆ ಮಾಡಬಲ್ಲರು. ಸಾಂಪ್ರದಾಯಿಕ ಸೈನಿಕರಂತೆ ಸಂಪೂರ್ಣವಾಗಿ ಶತ್ರು ಸೈನ್ಯದ ಮೇಲೆ ದಾಳಿ ನಡೆಸುವ ಬದಲು ಸ್ನೈಪರ್‌ಗಳು ಶತ್ರು ಪಡೆಯ ಪ್ರಮುಖ ವ್ಯಕ್ತಿಗಳಾದ ಆಫೀಸರ್‌ಗಳು, ಪೈಲಟ್‌ಗಳು, ಆಯುಧ ಸಾಗಾಣಿಕೆದಾರರು, ಹಾಗೂ ಸಂವಹನ ಉಪಕರಣಗಳ ಆಪರೇಟರ್‌ಗಳನ್ನು ಹುಡುಕಿ, ಗುರುತಿಸಿ, ದಾಳಿ ನಡೆಸುತ್ತವೆ. ಸ್ನೈಪರ್‌ಗಳು ಯಾವುದೇ ಮುನ್ಸೂಚನೆಯನ್ನೂ ನೀಡದೆ ದಾಳಿ ನಡೆಸಿ, ಶತ್ರುಗಳನ್ನು ಕೊಲ್ಲುವುದರಿಂದ, ಮಿಲಿಟರಿ ಸ್ನೈಪರ್‌ಗಳು ಶತ್ರುಗಳ ಧೈರ್ಯ ಮತ್ತು ಹೋರಾಡುವ ಸಾಮರ್ಥ್ಯವನ್ನೂ ಹಾಳುಗೆಡವುತ್ತವೆ.
ಯುದ್ಧ ಸಂದರ್ಭದಲ್ಲಿ ಯಾವುದೇ ನಿರ್ದಿಷ್ಟ ಗುರಿ ಇಲ್ಲದ ವೇಳೆ ಸ್ನೈಪರ್ ತನಗೆ ಸಿಗುವ ಅವಕಾಶಕ್ಕಾಗಿ ಹುಡುಕಾಡುತ್ತಿರುತ್ತಾನೆ. ಅವನು ಶತ್ರುವಿನ ಓಡಾಟವನ್ನು ಗಮನಿಸುತ್ತಾ, ತಾಳ್ಮೆಯಿಂದ ತನಗೆ ಬರುವ ಸರಿಯಾದ ಹೊಡೆತದ ಅವಕಾಶಕ್ಕಾಗಿ ಎದುರು ನೋಡುತ್ತಾನೆ. ಯಾರಾದರೂ ಮಿಲಿಟರಿ ಅಧಿಕಾರಿ ಸಿಗರೇಟ್ ಸೇದಲು ಹೊರ ಬಂದಾಗ, ಪೈಲಟ್ ತನ್ನ ಹೆಲಿಕಾಪ್ಟರ್ ಅನ್ನು ಪರಿಶೀಲಿಸುವಾಗ, ಗಸ್ತು ತಿರುಗುವ ಸೈನಿಕರು ಓಡಾಡುವಾಗ ತನ್ನಿಂದ ತಾನೆ ಈ ಅವಕಾಶಗಳು ಸ್ನೈಪರ್‌ಗೆ ಲಭಿಸುತ್ತವೆ.
ಇದನ್ನೂ ಓದಿ: ಹೈಪರ್‌ಸಾನಿಕ್ ಆಯುಧಗಳು ಎಂದರೇನು? ಅವು ಎಷ್ಟರ ಮಟ್ಟಿಗೆ ಕ್ರಾಂತಿಕಾರಕ?
ಸ್ನೈಪರ್‌ಗಳನ್ನು ಬೆಂಬಲ ನೀಡಲೂ ಬಳಸಿಕೊಳ್ಳಲಾಗುತ್ತದೆ. ಈ ಬೆಂಬಲ ನೀಡುವ ಕಾರ್ಯಗಳಲ್ಲಿ ಹೋರಾಡುತ್ತಿರುವ ತನ್ನ ಸೇನೆಯನ್ನು ದೂರದಿಂದ ಗಮನಿಸುವುದೂ ಆಗಿರುತ್ತದೆ. ಸ್ನೈಪರ್ ಹೀಗೆ ಗಮನಿಸುವ ಕಾರ್ಯದಲ್ಲಿ ನಿಯೋಜಿತನಾದಾಗ ಅವನು ಒಂದು ಸಾಕಷ್ಟು ಎತ್ತರದ, ಯಾರ ಕಣ್ಣಿಗೂ ಕಾಣಿಸಿಕೊಳ್ಳದ ಜಾಗದಲ್ಲಿ ತನ್ನನ್ನು ತಾನು ಮರೆ ಮಾಡಿ ಕುಳಿತಿರುತ್ತಾನೆ. ಅಲ್ಲಿಂದ ಅವನಿಗೆ ಯುದ್ಧ ರಂಗದ ಸ್ಪಷ್ಟ ಚಿತ್ರಣ ಕಾಣಿಸುತ್ತದೆ. ಅಲ್ಲಿ ಅವನು ಮುನ್ನುಗ್ಗುತ್ತಿರುವ ತನ್ನ ಸೇನೆಗೆ ತೊಂದರೆ ನೀಡಬಲ್ಲ ಶತ್ರುವಿನ ಮೇಲೆ ದಾಳಿ ನಡೆಸಿ, ತನ್ನ ಸೇನೆಗೆ ಸಹಕಾರ ನೀಡಬಹುದು. ಬ್ಲಾಕಿಂಗ್ ಆ್ಯಕ್ಷನ್ ಎಂಬ ಕಾರ್ಯಾಚರಣೆಯಲ್ಲಿ ಸ್ನೈಪರ್‌ಗಳು ತಮ್ಮ ಸೇನೆಯ ನಿಯಂತ್ರಣದಲ್ಲಿರುವ ಪ್ರದೇಶಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತಾರೆ. ಅಲ್ಲಿ ಅವರು ಎತ್ತರದ ಪ್ರದೇಶದಲ್ಲಿ ಕುಳಿತು, ನೆಲದಲ್ಲಿ ಕಾರ್ಯಾಚರಣೆ ನಡೆಸುವ ಸೇನಾಪಡೆಗಳಿಗೆ ಸಹಕರಿಸುತ್ತವೆ.
ಸ್ನೈಪರ್‌ಗಳು ಕೇವಲ ಮನುಷ್ಯರ ಮೇಲಷ್ಟೇ ದಾಳಿ ನಡೆಸುವುದಿಲ್ಲ. ಅವರಿಗೆ ಹಲವು ಬಾರಿ ವಸ್ತುಗಳನ್ನು, ಉಪಕರಣಗಳನ್ನು ನಾಶಪಡಿಸುವ ಕಾರ್ಯವನ್ನೂ ನೀಡಲಾಗುತ್ತದೆ. ಸ್ನೈಪರ್‌ಗಳು ಜನರೇಟರ್‌ಗಳು, ರೇಡಿಯೋಗಳು, ಟ್ರಾನ್ಸ್‌ಮಿಟರ್‌ಗಳು, ಅಥವಾ ಇಂಧನ ಮತ್ತು ನೀರಿನ ಸರಬರಾಜನ್ನೂ ಧ್ವಂಸಗೊಳಿಸಬಲ್ಲವು. ಒಂದು ಸುತ್ತು .50 ಕ್ಯಾಲಿಬರ್ ಗುಂಡನ್ನು ಹೆಲಿಕಾಪ್ಟರ್ ಅಥವಾ ಸಾಗಾಟ ವಾಹನಗಳ ಇಂಜಿನ್ ಬ್ಲಾಕ್ ಮೇಲೆ ದಾಳಿ ನಡೆಸುವುದು ಅವುಗಳನ್ನು ಚಲಾಯಿಸುವ ವ್ಯಕ್ತಿಯ ಮೇಲೆ ದಾಳಿ ನಡೆಸುವುದಕ್ಕೆ ಸಮವಾಗಿರುತ್ತದೆ.
ಇದನ್ನೂ ಓದಿ: ಅಗ್ನಿ ಪ್ರೈಮ್ ಪರೀಕ್ಷೆ ಯಶಸ್ವಿ: ಈ ಬ್ಯಾಲಿಸ್ಟಿಕ್ ಕ್ಷಿಪಣಿಯ ವಿಶೇಷತೆಗಳೇನು?
ಸ್ನೈಪರ್‌ಗಳನ್ನು ಸಾಮಾನ್ಯವಾಗಿ ಮಿಲಿಟರಿ ತಂತ್ರಜ್ಞರು ಫೋರ್ಸ್ ಮಲ್ಟಿಪ್ಲಯರ್ಸ್ ಎಂದು ಕರೆಯುತ್ತಾರೆ. ಇದನ್ನು ಸರಳವಾಗಿ ಹೇಳಬೇಕಾದರೆ, ಫೋರ್ಸ್ ಮಲ್ಟಿಪ್ಲಯರ್ ಎಂದರೆ ಓರ್ವ ವ್ಯಕ್ತಿ ಅಥವಾ ಒಂದು ಸಣ್ಣ ತಂಡವಾಗಿದ್ದು, ಅವರು ವಿಶೇಷ ತಂತ್ರಗಳನ್ನು ಬಳಸಿ, ಒಂದು ಬೃಹತ್ ಪಡೆ ಮಾಡಬಲ್ಲ ವಿಧ್ವಂಸವನ್ನು ನಡೆಸಬಲ್ಲರು. ಅದರಲ್ಲೂ ಸ್ನೈಪರ್‌ಗಳ ವೈಶಿಷ್ಟ್ಯವೆಂದರೆ ಅವರು ನೇರವಾಗಿ ಶತ್ರುವಿನ ಜೊತೆ ಕಾದಾಟಕ್ಕೆ ಇಳಿಯುವುದೇ ಇಲ್ಲ.
ಸ್ನೈಪರ್‌ಗಳು ಅವರು ಕೈಗೆತ್ತಿಕೊಳ್ಳುವ ಕಾರ್ಯಾಚರಣೆಗಳ ಕಾರಣದಿಂದ ಅವರು ತಮ್ಮೊಡನೆ ಅತ್ಯಂತ ಕನಿಷ್ಟ ಉಪಕರಣಗಳನ್ನು ಕೊಂಡೊಯ್ಯುತ್ತಾರೆ. ಅವರು ಸಾಮಾನ್ಯವಾಗಿ ಮರಗಿಡಗಳ ಮರೆಯಲ್ಲಿ ಅಥವಾ ಕತ್ತಲಿನ ಸಮಯದಲ್ಲಿ ಜೋಪಾನವಾಗಿ, ತಾಳ್ಮೆಯಿಂದ ಮುನ್ನಡೆಯುತ್ತಾರೆ. ಆದರೆ ಅವರು ಯಾವತ್ತೂ ಏಕಾಂಗಿಯಾಗಿ ಪ್ರಯಾಣ ಬೆಳೆಸುವುದಿಲ್ಲ. ಸ್ನೈಪರ್ ತಂಡಗಳು ಹಲವು ಬಾರಿ ಗಂಟೆಗಳ ಕಾಲ ಒಂದೇ ಕಡೆ ಉಳಿದುಕೊಂಡು, ಶತ್ರುಗಳ ಕಣ್ಣಿಗೆ ಬೀಳದಂತೆ ನೋಡಿಕೊಳ್ಳಬೇಕಾಗುತ್ತದೆ. ಅವರು ದಾಳಿ ನಡೆಸಲು ಅದಕ್ಕೆ ಸೂಕ್ತವಾದ ಸಮಯವನ್ನು ಎದುರು ನೋಡಬೇಕಾಗುತ್ತದೆ.
ಜಗತ್ತಿನಾದ್ಯಂತ ಇರುವ ಸ್ನೈಪರ್‌ಗಳು ಸಾಮಾನ್ಯವಾಗಿ .388 ಸಾಕೋ ಟಿಆರ್‌ಜಿ 42 ಸ್ನೈಪಿಂಗ್ ರೈಫಲ್ ಬಳಸುತ್ತಾರೆ.
ಭಾರತೀಯ ಸೇನೆಯೂ ಸಹ ಫಿನ್‌ಲ್ಯಾಂಡ್ ಮೂಲದ .388 ಸಾಕೋ ಟಿಆರ್‌ಜಿ 42 ಸ್ನೈಪರ್ ರೈಫಲ್‌ಗಳನ್ನು ಜಮ್ಮು ಮತ್ತು ಕಾಶ್ಮೀರದ ಲೈನ್ ಆಫ್ ಕಂಟ್ರೋಲ್ (ಎಲ್ಓಸಿ) ಯಲ್ಲಿರುವ ಪಡೆಗಳಿಗೆ ಒದಗಿಸಿವೆ.
