ಹಣ ಅಕ್ರಮ ವರ್ಗಾವಣೆ: ನಟಿ ಜಾಕ್ವೆಲಿನ್ ಫರ್ನಾಂಡಿಸ್‌ರ ಜಾಮೀನು ಆದೇಶ ನಾಳೆಗೆ ಕಾಯ್ದಿರಿಸಿದ ದೆಹಲಿ ನ್ಯಾಯಾಲಯ

ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿ ವಂಚಕ ಸುಕೇಶ್ ಚಂದ್ರಶೇಖರ್ ವಿರುದ್ಧದ 200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಜಾಮೀನು ನೀಡಬೇಕೆ ಅಥವಾ ಬೇಡವೇ ಎಂಬುದರ ಕುರಿತು ದೆಹಲಿ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿದೆ.
ಜಾಕ್ವೆಲಿನ್ ಫರ್ನಾಂಡಿಸ್
ಜಾಕ್ವೆಲಿನ್ ಫರ್ನಾಂಡಿಸ್

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿ ವಂಚಕ ಸುಕೇಶ್ ಚಂದ್ರಶೇಖರ್ ವಿರುದ್ಧದ 200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಜಾಮೀನು ನೀಡಬೇಕೆ ಅಥವಾ ಬೇಡವೇ ಎಂಬುದರ ಕುರಿತು ದೆಹಲಿ ನ್ಯಾಯಾಲಯ ಶುಕ್ರವಾರ ತನ್ನ ಆದೇಶವನ್ನು ಪ್ರಕಟಿಸಲಿದೆ.

ಈ ಹಿಂದೆ ಫರ್ನಾಂಡಿಸ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದ ವಿಶೇಷ ನ್ಯಾಯಾಧೀಶ ಶೈಲೇಂದ್ರ ಮಲಿಕ್, ನಟಿ ಹಾಗೂ ಇ.ಡಿ ಪರ ವಾದ ಮಂಡಿಸಿದ ವಕೀಲರ ವಾದ ಆಲಿಸಿದ ಬಳಿಕ ಶುಕ್ರವಾರಕ್ಕೆ ಆದೇಶವನ್ನು ಕಾಯ್ದಿರಿಸಿದ್ದಾರೆ.

ನವೆಂಬರ್ 24 ರಂದು ನ್ಯಾಯಾಲಯವು ಆರೋಪದ ಬಗ್ಗೆ ವಾದವನ್ನು ಆಲಿಸಲಿದೆ. ಸೆಪ್ಟೆಂಬರ್ 26 ರಂದು ನ್ಯಾಯಾಲಯವು ನಟಿಗೆ 50,000 ರೂಪಾಯಿಗಳ ವೈಯಕ್ತಿಕ ಬಾಂಡ್‌ ಮೇಲೆ ಮಧ್ಯಂತರ ಜಾಮೀನು ನೀಡಿತ್ತು.

ನ್ಯಾಯಾಲಯವು ಆಗಸ್ಟ್ 31 ರಂದು ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ ಪೂರಕ ಚಾರ್ಜ್ ಶೀಟ್ ಅನ್ನು ಗಮನಕ್ಕೆ ತೆಗೆದುಕೊಂಡಿತು ಮತ್ತು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಫರ್ನಾಂಡಿಸ್ ಅವರಿಗೆ ತಿಳಿಸಿತ್ತು.

ತನಿಖೆಗೆ ಸಂಬಂಧಿಸಿದಂತೆ ಇ.ಡಿಯಿಂದ ಹಲವು ಬಾರಿ ಸಮನ್ಸ್ ಪಡೆದಿದ್ದ ಫರ್ನಾಂಡಿಸ್ ಅವರನ್ನು ಪೂರಕ ಚಾರ್ಜ್ ಶೀಟ್‌ನಲ್ಲಿ ಮೊದಲ ಬಾರಿಗೆ ಆರೋಪಿ ಎಂದು ಹೆಸರಿಸಲಾಗಿದೆ. ಇ.ಡಿಯ ಹಿಂದಿನ ಚಾರ್ಜ್ ಶೀಟ್ ಮತ್ತು ಪೂರಕ ಚಾರ್ಜ್ ಶೀಟ್‌ನಲ್ಲಿ ಆಕೆಯನ್ನು ಆರೋಪಿ ಎಂದು ನಮೂದಿಸಿರಲಿಲ್ಲ.

ಆದಾಗ್ಯೂ, ದಾಖಲೆಗಳಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸಹ ನಟಿ ನೋರಾ ಫತೇಹಿ ದಾಖಲಿಸಿದ ಹೇಳಿಕೆಗಳ ವಿವರಗಳನ್ನು ಉಲ್ಲೇಖಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com