ಎಲ್ಗಾರ್ ಪರಿಷದ್ ಪ್ರಕರಣ: ಗೃಹಬಂಧನ ಕೇಳಿದ್ದ ಗೌತಮ್ ನವ್ಲಾಖಾ ಮನವಿಗೆ ಸುಪ್ರೀಂ ಕೋರ್ಟ್ ಸಮ್ಮತಿ
ಎಲ್ಗಾರ್ ಪರಿಷದ್ ಪ್ರಕರಣದ ಆರೋಪಿ ಗೌತಮ್ ನವ್ಲಾಖಾ ಅವರ ಗೃಹಬಂಧನದ ಕೋರಿಕೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಅಂಗೀಕರಿಸಿದ್ದು, ಪ್ರಾಥಮಿಕ ದೃಷ್ಟಿಕೋನದಲ್ಲಿ ಅವರ ವೈದ್ಯಕೀಯ ವರದಿಯನ್ನು ತಿರಸ್ಕರಿಸಲು ಯಾವುದೇ ಇತರೆ ಕಾರಣವಿಲ್ಲ ಎಂದು ಹೇಳಿದೆ.
Published: 10th November 2022 02:09 PM | Last Updated: 10th November 2022 04:40 PM | A+A A-

ಸುಪ್ರೀಂಕೋರ್ಟ್
ನವದೆಹಲಿ: ಎಲ್ಗಾರ್ ಪರಿಷದ್ ಪ್ರಕರಣದ ಆರೋಪಿ ಗೌತಮ್ ನವ್ಲಾಖಾ ಅವರ ಗೃಹಬಂಧನದ ಕೋರಿಕೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಅಂಗೀಕರಿಸಿದ್ದು, ಪ್ರಾಥಮಿಕ ದೃಷ್ಟಿಕೋನದಲ್ಲಿ ಅವರ ವೈದ್ಯಕೀಯ ವರದಿಯನ್ನು ತಿರಸ್ಕರಿಸಲು ಯಾವುದೇ ಇತರೆ ಕಾರಣವಿಲ್ಲ ಎಂದು ಹೇಳಿದೆ.
ಗೃಹ ಬಂಧನದ ಆದೇಶವನ್ನು 48 ಗಂಟೆಗಳ ಒಳಗೆ ಜಾರಿಗೊಳಿಸಬೇಕು ಎಂದು ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ಪೀಠ ಹೇಳಿದೆ.
ಗೃಹ ಬಂಧನದಲ್ಲಿರಿಸಲು ಪೊಲೀಸ್ ಸಿಬ್ಬಂದಿಯನ್ನು ಲಭ್ಯವಾಗುವಂತೆ ಮಾಡುವ ವೆಚ್ಛ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ)ಯು ಹೇಳಿರುವ ಅಂದಾಜು ಮೊತ್ತವಾದ 2.4 ಲಕ್ಷ ರೂಪಾಯಿಯನ್ನು ಠೇವಣಿ ಇಡುವಂತೆಯೂ ಪೀಠವು ನವ್ಲಾಖಾ ಅವರಿಗೆ ಸೂಚಿಸಿದೆ.
ನವ್ಲಾಖಾ ಅವರ ತಿಂಗಳ ಗೃಹಬಂಧನದ ವೇಳೆ ಕಂಪ್ಯೂಟರ್ ಮತ್ತು ಇಂಟರ್ನೆಟ್ ಬಳಸಲು ಅನುಮತಿ ನೀಡಲಾಗುವುದಿಲ್ಲ ಎಂದು ಅದು ಹೇಳಿದೆ.
ಇದನ್ನೂ ಓದಿ: ಎಲ್ಗಾರ್ ಪ್ರಕರಣ: ಸಾಮಾಜಿಕ ಕಾರ್ಯಕರ್ತ ಗೌತಮ್ ನವ್ಲಾಖಾಗೆ ಜಾಮೀನು ನಿರಾಕರಿಸಿದ ವಿಶೇಷ ಎನ್ಐಎ ಕೋರ್ಟ್
70 ವರ್ಷದ ನವ್ಲಾಖಾ ಅವರು ಎಲ್ಗಾರ್ ಪರಿಷದ್-ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ 2018ರ ಆಗಸ್ಟ್ 28ರಂದು ಬಂಧಿಸಲಾಗಿತ್ತು. ಮೊದಲಿಗೆ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು, ಸದ್ಯ ಅವರು ನವಿ ಮುಂಬೈನ ತಲೋಜಾ ಜೈಲಿನಲ್ಲಿದ್ದಾರೆ.
ಈ ಪ್ರಕರಣವು 2017ರ ಡಿಸೆಂಬರ್ 31ರಂದು ಪುಣೆಯ ಶನಿವಾರವಾಡದಲ್ಲಿ ನಡೆದ ಎಲ್ಗಾರ್ ಪರಿಷದ್ ಸಮಾವೇಶದಲ್ಲಿ ಮಾಡಿದ ಆಪಾದಿತ ಪ್ರಚೋದಕ ಭಾಷಣಗಳಿಗೆ ಸಂಬಂಧಿಸಿದ್ದಾಗಿದೆ. ಇನ್ನು ಪ್ರಚೋದಿತ ಹೇಳಿಕೆಯಿಂದಾಗಿ ಮರುದಿನ ನಗರದ ಹೊರವಲಯದಲ್ಲಿರುವ ಕೋರೆಗಾಂವ್-ಭೀಮಾ ಯುದ್ಧ ಸ್ಮಾರಕದ ಬಳಿ ಹಿಂಸಾಚಾರ ನಡೆಯಲು ಕಾರಣವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.