ಪಂಜಾಬ್: ಡೇರಾ ಸಚ್ಚಾ ಸೌದಾ ಅನುಯಾಯಿ ಹತ್ಯೆ; ಮೂವರು ಶೂಟರ್‌ಗಳ ಬಂಧನ!
ಪಂಜಾಬ್‌ನ ಫರೀದ್‌ಕೋಟ್‌ನಲ್ಲಿ ಡೇರಾ ಸಚ್ಚಾ ಸೌದಾ ಅನುಯಾಯಿ ಪ್ರದೀಪ್ ಸಿಂಗ್‌ನನ್ನು ಹತ್ಯೆಗೈದ ಮೂವರು ಶೂಟರ್‌ಗಳನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
Published: 11th November 2022 03:36 PM | Last Updated: 11th November 2022 04:42 PM | A+A A-

ಶೂಟೌಟ್ ದೃಶ್ಯ
ಫರೀದ್‌ಕೋಟ್: ಪಂಜಾಬ್‌ನ ಫರೀದ್‌ಕೋಟ್‌ನಲ್ಲಿ ಡೇರಾ ಸಚ್ಚಾ ಸೌದಾ ಅನುಯಾಯಿ ಪ್ರದೀಪ್ ಸಿಂಗ್‌ನನ್ನು ಹತ್ಯೆಗೈದ ಮೂವರು ಶೂಟರ್‌ಗಳನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಪಂಜಾಬ್ ಪೊಲೀಸ್ ಗುಪ್ತಚರ ಘಟಕ ಮತ್ತು ದೆಹಲಿ ಪೊಲೀಸ್ ಕೌಂಟರ್ ಇಂಟೆಲಿಜೆನ್ಸ್ ಯುನಿಟ್ ಫರೀದ್‌ಕೋಟ್‌ನಲ್ಲಿ ಪ್ರದೀಪ್ ಸಿಂಗ್‌ನನ್ನು ಕೊಂದ ಆರು ಆರೋಪಿಗಳನ್ನು ಗುರುತಿಸಿತ್ತು. ಇದಾದ ನಂತರ ಅವರನ್ನು ಹಿಡಿಯಲು ಪೊಲೀಸ್ ಪಡೆಗಳು ದಾಳಿ ನಡೆಸಿದ್ದವು.
ಶುಕ್ರವಾರ ಬೆಳಗಿನ ಜಾವ 3.30ರ ಸುಮಾರಿಗೆ ಪಟಿಯಾಲಾದ ಬಕ್ಷಿವಾಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆಸಿದ ಪೊಲೀಸ್ ತಂಡ ಡೇರಾ ಸಚ್ಚಾ ಸೌಧದ ಅನುಯಾಯಿಯ ಹತ್ಯೆಯಲ್ಲಿ ಭಾಗಿಯಾಗಿದ್ದ ಆರು ಮಂದಿಯಲ್ಲಿ ಮೂವರನ್ನು ಬಂಧಿಸಿದೆ. ಬಂಧಿತರನ್ನು ಹರಿಯಾಣದ ನಿವಾಸಿಗಳೆಂದು ಪೊಲೀಸರು ಗುರುತಿಸಿದ್ದಾರೆ. ಇಬ್ಬರು ರೋಹ್ಟಕ್ ನಿವಾಸಿಗಳಾಗಿದ್ದು ಮತ್ತೋರ್ವ ಭಿವಾನಿ ನಿವಾಸಿಯಾಗಿದ್ದಾನೆ. ಇನ್ನು ತಲೆಮರೆಸಿಕೊಂಡಿರುವ ಮೂರು ಆರೋಪಿಗಳ ಪತ್ತೆಗೆ ತಂಡ ಹೆಚ್ಚಿನ ಪ್ರಯತ್ನ ನಡೆಸುತ್ತಿದೆ.
ಒಟ್ಟು ಆರು ಮಂದಿ ದಾಳಿಕೋರರಿದ್ದರು. ನಾಲ್ವರು ಹರಿಯಾಣದವರಾಗಿದ್ದು ಇಬ್ಬರು ಪಂಜಾಬ್ ನವರು ಎಂದು ಪೊಲೀಸರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೆನಡಾದಲ್ಲಿ ಕುಳಿತಿದ್ದ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಆರೋಪಿಗಳಿಗೆ ಸೂಚನೆಗಳನ್ನು ನೀಡುತ್ತಿದ್ದ. ಗೋಲ್ಡಿ ಬ್ರಾರ್ ಪರಾರಿಯಾಗಿರುವ ಹರ್ವಿಂದರ್ ಸಿಂಗ್ ಅಲಿಯಾಸ್ ರಿಂಡಾ ಮತ್ತು ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಸಹಾಯಕ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಂಜಾಬ್: ಫರೀದ್‌ಕೋಟ್ ನಲ್ಲಿ ಡೇರಾ ಅನುಯಾಯಿಗೆ ಗುಂಡಿಕ್ಕಿ ಹತ್ಯೆ, ಘಟನೆ ಸಿಸಿಟಿವಿಯಲ್ಲಿ ಸೆರೆ
ಪೊಲೀಸರ ಪ್ರಕಾರ, ಆರೋಪಿಗಳು ಪ್ರದೀಪ್ ಸಿಂಗ್ ಮೇಲೆ ಸುಮಾರು 60 ಗುಂಡುಗಳನ್ನು ಹಾರಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಡೇರಾ ಸಚ್ಚಾ ಸೌಧದ ಅನುಯಾಯಿ ಪ್ರದೀಪ್ ಸಿಂಗ್ ಗುರುವಾರ ಬೆಳಿಗ್ಗೆ ಪಂಜಾಬ್‌ನ ಫರೀದ್‌ಕೋಟ್‌ನಲ್ಲಿರುವ ತನ್ನ ಅಂಗಡಿಗೆ ಹೋಗುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದು. ಪ್ರದೀಪ್ ಸಿಂಗ್ ಬಾರ್ಗರಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದನು.
ಶಾಂತಿ ಕಾಪಾಡುವಂತೆ ಸಿಎಂ ಮಾನ್ ಸೂಚನೆ
ಪೊಲೀಸರ ಪ್ರಕಾರ, ಪ್ರದೀಪ್ ಸಿಂಗ್ ಅವರ ಭದ್ರತಾ ಸಿಬ್ಬಂದಿಯೂ ಪ್ರತಿದಾಳಿ ನಡೆಸಿದರು. ಏತನ್ಮಧ್ಯೆ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗುರುವಾರ ಮುಖ್ಯಮಂತ್ರಿಗಳೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಕೊಟ್ಕಾಪುರ ಘಟನೆಯ ಕುರಿತು ವಿವರವಾಗಿ ಚರ್ಚಿಸಲಾಗಿದೆ ಎಂದು ವಿಶೇಷ ಪೊಲೀಸ್ ಮಹಾನಿರ್ದೇಶಕ (ಗೃಹರಕ್ಷಕ ದಳ) ಸಂಜೀವ್ ಕಲ್ರಾ ತಿಳಿಸಿದ್ದಾರೆ.
ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲಾಗುವುದು ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಖಡಾಖಂಡಿತವಾಗಿ ಹೇಳಿದ್ದಾರೆ. ಮುಂದಿನ ವಾರ ಮತ್ತೊಂದು ಸಭೆ ಕರೆಯಲಾಗುವುದು. ಪ್ರಕರಣದ ಪರಿಶೀಲನೆ ನಡೆಯುತ್ತಿದೆ.