ಭಾರತ್ ಜೋಡೋ ಯಾತ್ರೆಗೆ ರಾಹುಲ್ ಗಾಂಧಿ ಒತ್ತು, ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇಲ್ಲ: ಕಾಂಗ್ರೆಸ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಪಕ್ಷದ ಭಾರತ್ ಜೋಡೋ ಯಾತ್ರೆಯನ್ನು ಮುಂದುವರಿಸಲು ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇಲ್ಲ ಎಂದು ಪಕ್ಷದ ಪ್ರಧಾನ ಕಾರ್ಯಕರ್ಶಿ ಮತ್ತು ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಪಕ್ಷದ ಭಾರತ್ ಜೋಡೋ ಯಾತ್ರೆಯನ್ನು ಮುಂದುವರಿಸುವ ಸಲುವಾಗಿ ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇಲ್ಲ ಎಂದು ಪಕ್ಷದ ಪ್ರಧಾನ ಕಾರ್ಯಕರ್ಶಿ ಮತ್ತು ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಹೇಳಿದ್ದಾರೆ.

ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನ ಈ ವರ್ಷ ಡಿಸೆಂಬರ್ 7 ರಿಂದ ಡಿಸೆಂಬರ್ 29 ರವರೆಗೆ ನಡೆಯಲಿದೆ. ಮುಂಬರುವ ಚಳಿಗಾಲದ ಅಧಿವೇಶನ ಒಟ್ಟು 17 ದಿನ ನಡೆಯಲಿದೆ.

ರಾಜ್ಯಸಭೆಯ ಅಧ್ಯಕ್ಷರಾಗಿರುವ ಉಪ ರಾಷ್ಟ್ರಪತಿ ಜಗದೀಪ್ ಧಂಕರ್ ಅವರು ಮೇಲ್ಮನೆಯಲ್ಲಿ ಕಲಾಪಗಳನ್ನು ನಿರ್ವಹಿಸುವ ಮೊದಲ ಅಧಿವೇಶನ ಇದಾಗಿದೆ.

ಚಳಿಗಾಲದ ಅಧಿವೇಶನದಲ್ಲಿ, ರಾಜ್ಯಸಭೆಯ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಬೇರೆಯವರನ್ನು ಕಾಂಗ್ರೆಸ್ ಆಯ್ಕೆ ಮಾಡಬಹುದು. ಈ ಮೂದಲು ಪಕ್ಷದ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಪಕ್ಷ ನಾಯಕನ ಸ್ಥಾನದಲ್ಲಿದ್ದರು. ಪಕ್ಷದ 'ಒಬ್ಬ ವ್ಯಕ್ತಿ, ಒಂದು ಹುದ್ದೆ' ನೀತಿಗೆ ಬದ್ಧರಾಗಿ ಸಾಂಸ್ಥಿಕ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಈ ಹುದ್ದೆಯನ್ನು ತ್ಯಜಿಸಿದರು.

'ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಅಸ್ತಿತ್ವದಲ್ಲಿರುವ ಮೀಸಲಾತಿಗೆ ತೊಂದರೆಯಾಗದಂತೆ ಎಲ್ಲಾ ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲ್ಯುಎಸ್) ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವುದನ್ನು ಕಾಂಗ್ರೆಸ್ ಬೆಂಬಲಿಸುತ್ತದೆ' ಎಂದು ಜೈರಾಮ್ ರಮೇಶ್ ಹೇಳಿದರು.

ಈ ನಡುವೆ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ 66ನೇ ದಿನಕ್ಕೆ ಕಾಲಿಟ್ಟಿದೆ.  ಮಹಾರಾಷ್ಟ್ರದಲ್ಲಿರುವ ಭಾರತ್ ಜೋಡೋ ಯಾತ್ರೆಯು ಶನಿವಾರ ಮಹಾರಾಷ್ಟ್ರದ ಹಿಂಗೋಲಿಯ ಕಳಮ್‌ನೂರಿನ ಶೆವಾಲಾ ಗ್ರಾಮದಿಂದ ಪುನರಾರಂಭಗೊಂಡಿದೆ.

ಈಗಾಗಲೇ ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣದ ಭಾಗಗಳಲ್ಲಿ ಮುಕ್ತಾಯಗೊಂಡಿರುವ ಭಾರತ್ ಜೋಡೋ ಯಾತ್ರೆ ಇಂದು ಮಹಾರಾಷ್ಟ್ರದಲ್ಲಿದೆ. ಯಾತ್ರೆಗೆ ದೇಶದಾದ್ಯಂತ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಾಮಾಜಿಕ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗುತ್ತಿದ್ದು, ದಿನದಿಂದ ದಿನಕ್ಕೆ ಪ್ರತಿಕ್ರಿಯೆ ಹೆಚ್ಚುತ್ತಿದೆ.

ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮತ್ತು ಠಾಕ್ರೆ ಬಣದ ಶಿವಸೇನೆ ಕೂಡ ಯಾತ್ರೆಯಲ್ಲಿ ಭಾಗವಹಿಸಲು ಒಪ್ಪ್ಿಗೆ ನೀಡಿದ್ದು, ಅದರ ಮಹತ್ವವನ್ನು ಹೆಚ್ಚುವಂತೆ ಮಾಡಿದೆ.

ಭಾರತ್ ಜೋಡೋ ಯಾತ್ರೆಯು ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. 3,570 ಕಿಮೀ ನಡೆಯುವ ಯಾತ್ರೆಯಲ್ಲಿ ಇನ್ನೂ 2,355 ಕಿಮೀ ದೂರವನ್ನು ಕ್ರಮಿಸಲಿದೆ. ಇದು ಮುಂದಿನ ವರ್ಷ ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ. ಭಾರತದ ಇತಿಹಾಸದಲ್ಲಿ ಯಾವುದೇ ಭಾರತೀಯ ರಾಜಕಾರಣಿಗಳು ಕಾಲ್ನಡಿಗೆಯಲ್ಲಿ ನಡೆಸಿದ ಅತಿ ಉದ್ದದ ಮೆರವಣಿಗೆ ಇದಾಗಿದೆ ಎಂದು ಕಾಂಗ್ರೆಸ್ ಈ ಹಿಂದೆ ಹೇಳಿಕೆಯಲ್ಲಿ ಹೇಳಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com