ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿಯ 5 ಔಷಧಿ ಉತ್ಪನ್ನಗಳ ಮೇಲಿನ ನಿಷೇಧ ರದ್ದು
ಡೆಹ್ರಾಡೂನ್: ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಉತ್ಪನ್ನಗಳನ್ನು ತಯಾರಿಸುವ ದಿವ್ಯಾ ಫಾರ್ಮಸಿಗೆ ಮಧುಮೇಹ, ರಕ್ತದೊತ್ತಡ, ಗೋಯಿಟರ್, ಗ್ಲುಕೋಮಾ ಮತ್ತು ಅಧಿಕ ಕೊಲೆಸ್ಟ್ರಾಲ್‌ಗೆ ಸಂಬಂಧಿಸಿದ ಐದು ಔಷಧಗಳ ಉತ್ಪಾದನೆಯನ್ನು ನಿಲ್ಲಿಸುವಂತೆ ಸೂಚಿಸಿದ್ದ ತನ್ನ ಆದೇಶವನ್ನು ಉತ್ತರಾಖಂಡದ ಆಯುರ್ವೇದ ಮತ್ತು ಯುನಾನಿ ಪರವಾನಗಿ ಪ್ರಾಧಿಕಾರವು ರದ್ದುಗೊಳಿಸಿದೆ.
ಹಿಂದಿನ ಆದೇಶವನ್ನು ತಿದ್ದುಪಡಿ ಮಾಡಿ, ಪ್ರಾಧಿಕಾರವು ಈ ಔಷಧಿಗಳ ಉತ್ಪಾದನೆಯನ್ನು ಮುಂದುವರಿಸಲು ಸಂಸ್ಥೆಗೆ ಅನುಮತಿ ನೀಡುವ ಹೊಸ ಆದೇಶವನ್ನು ಶನಿವಾರ ಹೊರಡಿಸಿದೆ.
ನವೆಂಬರ್ 9ರಂದು ಹೊರಡಿಸಿದ್ದ ಹಿಂದಿನ ಆದೇಶದಲ್ಲಿ ದೋಷ ಕಂಡುಬಂದಿರುವುದನ್ನು ಗಮನಿಸಿದ ರಾಜ್ಯ ಆರೋಗ್ಯ ಪ್ರಾಧಿಕಾರದ ಔಷಧ ನಿಯಂತ್ರಕದ ಜಿಸಿಎನ್ ಜಂಗಪಂಗಿ, ಈ ಆದೇಶವನ್ನು ತರಾತುರಿಯಲ್ಲಿ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
'ಈ ಆದೇಶವನ್ನು ನೀಡುವ ಮೊದಲು ಕಂಪನಿಯು ತನ್ನ ನಿಲುವು ಏನೆಂದು ತಿಳಿಸಲು ನಾವು ಸಮಯವನ್ನು ನೀಡಬೇಕಾಗಿತ್ತು' ಎಂದು ಹೇಳಿದ್ದಾರೆ.
ರಾಮ್‌ದೇವ್ ಅವರ ಆಪ್ತ ಸಹಾಯಕ ಆಚಾರ್ಯ ಬಾಲಕೃಷ್ಣ ಅವರು ತಪ್ಪನ್ನು ಸರಿಪಡಿಸಿದ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ತನ್ನ ಹಿಂದಿನ ಆದೇಶದಲ್ಲಿ, ಪ್ರಾಧಿಕಾರವು ತನ್ನ ಐದು ಉತ್ಪನ್ನಗಳಾದ ಬಿಪಿಗ್ರಿಟ್, ಮಧುಗ್ರಿಟ್, ಥೈರೋಗ್ರಿಟ್, ಲಿಪಿಡಮ್ ಮಾತ್ರೆಗಳು ಮತ್ತು ಐಗ್ರಿಟ್ ಗೋಲ್ಡ್ ಮಾತ್ರೆಗಳ ಉತ್ಪಾದನೆಯನ್ನು ನಿಲ್ಲಿಸುವಂತೆ ದಿವ್ಯಾ ಫಾರ್ಮಸಿಗೆ ಸೂಚಿಸಿತ್ತು. ಇವುಗಳನ್ನು ರಕ್ತದೊತ್ತಡ, ಮಧುಮೇಹ, ಗಾಯಿಟರ್, ಗ್ಲುಕೋಮಾ ಮತ್ತು ಅಧಿಕ ಕೊಲೆಸ್ಟ್ರಾಲ್‌ಗೆ ಎಂದು ಹೇಳಲಾಗುತ್ತಿದೆ.
ಪ್ರಾಧಿಕಾರವು ಅವುಗಳ ಪರಿಷ್ಕೃತ ಸೂತ್ರೀಕರಣ ಹಾಳೆಗಳನ್ನು ಅನುಮೋದಿಸಿದ ನಂತರವೇ ಕಂಪನಿಯು ಈ ಉತ್ಪನ್ನಗಳ ತಯಾರಿಕೆಯನ್ನು ಪುನರಾರಂಭಿಸಬಹುದು ಎಂದು ಹಿಂದಿನ ಆದೇಶವು ಹೇಳಿದೆ.
ದಿವ್ಯಾ ಫಾರ್ಮಸಿಯು ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತು) ಕಾಯ್ದೆ ಹಾಗೂ ಡ್ರಗ್ಸ್ ಮತ್ತು ಕಾಸ್ಮೆಟಿಕ್ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಕೇರಳದ ವೈದ್ಯ ಕೆ.ವಿ. ಬಾಬು ಅವರು ಸಲ್ಲಿಸಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಬಾಬು ಅವರು ಸಂಸ್ಥೆ ವಿರುದ್ಧ ಜುಲೈನಲ್ಲಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು ಮತ್ತು ಅಕ್ಟೋಬರ್ 11 ರಂದು ಮತ್ತೊಂದು ಇಮೇಲ್ ಮೂಲಕ ಅದನ್ನು ಫಾಲೋಅಪ್ ಮಾಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ