ಜಮ್ಮು ಮತ್ತು ಕಾಶ್ಮೀರ: ಅನಂತ್‌ನಾಗ್‌ನಲ್ಲಿ ಇಬ್ಬರು ವಲಸೆ ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರು, 10 ದಿನಗಳಲ್ಲಿ 2ನೇ ದಾಳಿ

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನ ಜಿಲ್ಲೆಯಲ್ಲಿ ಇಬ್ಬರು ವಲಸೆ ಕಾರ್ಮಿಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆಂದು ಭಾನುವಾರ ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅನಂತನಾಗ್ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನ ಜಿಲ್ಲೆಯಲ್ಲಿ ಇಬ್ಬರು ವಲಸೆ ಕಾರ್ಮಿಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆಂದು ಭಾನುವಾರ ತಿಳಿದುಬಂದಿದೆ.

ರಖ್-ಮೊಮಿನ್ ಎಂಬ ಪ್ರದೇಶದಲ್ಲಿ ಇಬ್ಬರು ವಲಸೆ ಕಾರ್ಮಿಕರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

"ಅನಂತನಾಗ್‌ನ ರಖ್-ಮೊಮಿನ್ ಪ್ರದೇಶದಲ್ಲಿ ಇಬ್ಬರು ವಲಸೆ ಕಾರ್ಮಿಕರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿ ಗಾಯಗೊಳಿಸಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ದಾಳಿ ನಡೆದ ಪ್ರದೇಶದ ಸುತ್ತಲೂ ಭಾರತೀಯ ಸೇನಾಪಡೆ ಸುತ್ತುವರೆದಿದ್ದು, ಕಾರ್ಯಾಚರಣೆ ಆರಂಭಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಉಗ್ರರು ವಲಸೆ ಕಾರ್ಮಿಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಲೇ ಇದ್ದಾರೆ. ಈ ಹಿಂದೆ ಕೂಡ ಇದೇ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು.

ಉಗ್ರರ ದಾಳಿಗೆ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲಕ ಕಾರ್ಮಿಕರೊಬ್ಬರು ಗಾಯಗೊಂಡಿದ್ದರು. ಈ ದಾಳಿ ನಡೆದು 10 ದಿನಗಳು ಕಳೆದಿದ್ದು, ಇದೀಗ ಮತ್ತೊಂದು ದಾಳಿ ನಡೆದಿರುವುದು ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ.

ಪಂಜಾಬ್‌ ಗಡಿಯಲ್ಲಿ 4 ಹೆರಾಯಿನ್‌ ಪ್ಯಾಕೇಟ್‌ ಪತ್ತೆ
ಈ ನಡುವೆ ಬಿಎಸ್‌ಎಫ್‌ನ 116ನೇ ಬೆಟಾಲಿಯನ್‌ಗೆ ಸೇರಿದ ಸೈನಿಕರು ನಿನ್ನೆ ಪಂಜಾಬ್‌ ಸೆಕ್ಟರ್‌ನ ಕುಲ್ವಂತ್ ಬಾರ್ಡರ್ ಔಟ್ ಪೋಸ್ಟ್ (ಬಿಒಪಿ) ಬಳಿ ನಾಲ್ಕು ಹೆರಾಯಿನ್ ಪ್ಯಾಕೆಟ್‌ಗಳನ್ನು ಪತ್ತೆ ಮಾಡಿದ್ದಾರೆ,

ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಗಡಿಯಲ್ಲಿರುವ ನಿಜಂವಾಲಾ ಗ್ರಾಮದ ಬಳಿಯ ಹೊಲಗಳಲ್ಲಿ ಮರದ ಕೆಳಗೆ ಹಳದಿ ಟೇಪ್‌ನಿಂದ ಸುತ್ತಿದ ಪೊಟ್ಟಣಗಳಿರುವುದನ್ನು ಸೇನಾಪಡೆ ಗಮನಿಸಿದೆ. ಈ ವೇಳೆ ಪೊಟ್ಟಣವನ್ನು ತೆರೆದಾಗ 312 ಗ್ರಾಂ ತೂಕದ ನಾಲ್ಕು ಹೆರಾಯಿನ್ ಪ್ಯಾಕೆಟ್‌ಗಳು ಪತ್ತೆಯಾಗಿವೆ ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಎಸ್‌ಎಫ್‌ನ ಜಾಗರೂಕ ಪಡೆಗಳು ಹಳ್ಳಿಯ ಕೃಷಿ ಕ್ಷೇತ್ರದಿಂದ ಗಡಿ ಬೇಲಿಯ ಮುಂದೆ 4 ಪ್ಯಾಕೇಟ್ ಹೆರಾಯಿನ್  ವಶಪಡಿಸಿಕೊಂಡವೆ. ಬಿಎಸ್‌ಎಫ್, ಅಕ್ರಮ ಸರಂಜಾಮುಗಳನ್ನು ಕಳ್ಳಸಾಗಣೆ ಮಾಡುವ ದೇಶವಿರೋಧಿ ಅಂಶಗಳ ದುಷ್ಕೃತ್ಯದ ಪ್ರಯತ್ನವನ್ನು ಮತ್ತೊಮ್ಮೆ ವಿಫಲಗೊಳಿಸಿದೆ” ಎಂದು ಪಂಜಾಬ್ ಫ್ರಾಂಟಿಯರ್ ಟ್ವೀಟ್‌ನಲ್ಲಿ ತಿಳಿಸಿದೆ.

ಇತ್ತೀಚಿನ ವರ್ಷಗಳಲ್ಲಿ, ಪಂಜಾಬ್ ಗಡಿ ಪ್ರದೇಶಗಳಲ್ಲಿ ಮಾದಕವಸ್ತುಗಳು ಮತ್ತು ಶಸ್ತ್ರಾಸ್ತ್ರಗಳನ್ನು ಎಸೆಯುವ ಹೆಚ್ಚಿನ ನಿದರ್ಶನಗಳು ಪತ್ತೆಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com