ಭೀಮಾ ಕೋರೆಗಾಂವ್ ಪ್ರಕರಣ: ದಲಿತ ಚಿಂತಕ ಆನಂದ್ ತೇಲ್ತುಂಬೆಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್
ಭೀಮಾ ಕೋರೆಗಾಂವ್-ಎಲ್ಗಾರ್ ಪರಿಷದ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಕ್ಸಲ್ ಸಂಪರ್ಕ ಆರೋಪ ಎದುರಿಸುತ್ತಿರುವ ಐಐಟಿಯ ಮಾಜಿ ಪ್ರಾಧ್ಯಾಪಕ ಮತ್ತು ದಲಿತ ಚಿಂತಕ ಆನಂದ್ ತೆಲ್ತುಂಬೆ ಅವರಿಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
Published: 18th November 2022 11:56 AM | Last Updated: 18th November 2022 01:35 PM | A+A A-

ಆನಂದ್ ತೇಲ್ತುಂಬೆ
ನವದೆಹಲಿ: ಭೀಮಾ ಕೋರೆಗಾಂವ್-ಎಲ್ಗಾರ್ ಪರಿಷದ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಕ್ಸಲ್ ಸಂಪರ್ಕ ಆರೋಪ ಎದುರಿಸುತ್ತಿರುವ ಐಐಟಿಯ ಮಾಜಿ ಪ್ರಾಧ್ಯಾಪಕ ಮತ್ತು ದಲಿತ ಚಿಂತಕ ಆನಂದ್ ತೇಲ್ತುಂಬೆ ಅವರಿಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ವಿಶೇಷ ಎನ್‌ಐಎ ನ್ಯಾಯಾಲಯ ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರ ವಿರುದ್ಧ ಆನಂದ್ ತೇಲ್ತುಂಬೆ ಕಳೆದ ವರ್ಷ ಹೈಕೋರ್ಟ್ ಮೊರೆ ಹೋಗಿದ್ದರು.
ಈ ಪ್ರಕರಣವು 2017ರ ಡಿಸೆಂಬರ್ 31ರಂದು ಪುಣೆಯ ಶನಿವಾರವಾಡದಲ್ಲಿ ನಡೆದ ಎಲ್ಗಾರ್ ಪರಿಷದ್ ಸಮಾವೇಶದಲ್ಲಿ ಮಾಡಿದ ಪ್ರಚೋದನಕಾರಿ ಭಾಷಣಗಳಿಗೆ ಸಂಬಂಧಿಸಿದೆ. ಇದು ಮರುದಿನ ನಗರದ ಹೊರವಲಯದಲ್ಲಿರುವ ಭೀಮಾ ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಹಿಂಸಾಚಾರವನ್ನು ಪ್ರಚೋದಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮುಂಬೈನಲ್ಲೇ ವಾಸಿಸಬೇಕು, ಮನೆಯಲ್ಲಿ ಸಂದರ್ಶಕರಿಗೆ ಅವಕಾಶ ಇಲ್ಲ: ವರವರ ರಾವ್‌ಗೆ ವಿಶೇಷ ಕೋರ್ಟ್
ಈ ಹಿಂಸಾಚಾರದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಹಲವು ಗಾಯಗೊಂಡಿದ್ದಾರೆ. ಹನ್ನೆರಡಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ಶಿಕ್ಷಣತಜ್ಞರನ್ನು ಆರೋಪಿಗಳೆಂದು ಹೆಸರಿಸಲಾಗಿರುವ ಈ ಪ್ರಕರಣವನ್ನು ಸದ್ಯ ಎನ್‌ಐಎ ತನಿಖೆ ನಡೆಸುತ್ತಿದ್ದು, ಇದಕ್ಕೂ ಮುನ್ನ ಪುಣೆ ಪೊಲೀಸರು ತನಿಖೆ ನಡೆಸಿದ್ದರು.