ಶಿವಾಜಿ ಕುರಿತಾದ ಹೇಳಿಕೆ: ಮಹಾರಾಷ್ಟ್ರ ರಾಜ್ಯಪಾಲರ ವಿರುದ್ಧ ಪ್ರತಿಭಟಿಸುವಂತೆ ಬಿಜೆಪಿಗೆ ಕೇಳಿದ ಸಂಜಯ್ ರಾವುತ್

ಛತ್ರಪತಿ ಶಿವಾಜಿ ಮಹಾರಾಜರ ಕುರಿತಾದ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ಹೇಳಿಕೆಯನ್ನು ಖಂಡಿಸಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಸಂಸದ ಸಂಜಯ್ ರಾವುತ್, ಶಿವಾಜಿಗೆ ಅವಮಾನ ಮಾಡಿರುವ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸುವಂತೆ ಬಿಜೆಪಿಗೆ ಕೇಳಿದ್ದಾರೆ.
ಸಂಜಯ್ ರಾವುತ್
ಸಂಜಯ್ ರಾವುತ್

ಮುಂಬೈ: ಛತ್ರಪತಿ ಶಿವಾಜಿ ಮಹಾರಾಜರ ಕುರಿತಾದ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ಹೇಳಿಕೆಯನ್ನು ಖಂಡಿಸಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಸಂಸದ ಸಂಜಯ್ ರಾವುತ್, ಶಿವಾಜಿಗೆ ಅವಮಾನ ಮಾಡಿರುವ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸುವಂತೆ ಬಿಜೆಪಿಗೆ ಕೇಳಿದ್ದಾರೆ.

ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಛತ್ರಪತಿ ಶಿವಾಜಿ ಮಹಾರಾಜರನ್ನು 'ಹಳೆಯ ಐಕಾನ್' ಎಂದು ಕರೆದು ಶನಿವಾರ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರ ಸಾವರ್ಕರ್ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಪ್ರತಿಭಟಿಸುತ್ತಿದ್ದು, ಈಗ ಅವರು ರಾಜ್ಯಪಾಲರ ವಿರುದ್ಧವೂ ಪ್ರತಿಭಟನೆ ನಡೆಸಬೇಕು ಎಂದು ಹೇಳಿದರು.

'ರಾಜ್ಯಪಾಲರು ನೀಡಿರುವ ಹೇಳಿಕೆ ಮಹಾರಾಷ್ಟ್ರ ಮತ್ತು ಶಿವಾಜಿ ಮಹಾರಾಜರಿಗೆ ಮಾಡಿದ ಅವಮಾನ. ವೀರ ಸಾವರ್ಕರ್ ವಿರುದ್ಧ ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಅವರು ಶೂಗಳಿಂದ ಹೊಡೆಯುತ್ತಿದ್ದಾರೆ. ಈಗ ಅದೇ ಶೂಗಳು ರಾಜಭವನಕ್ಕೂ ಹೋಗಬೇಕು. ಹೀಗಾದರೆ ಮಾತ್ರ ಅವರು ಮಹಾರಾಷ್ಟ್ರದ ಮಗ, ಇಲ್ಲದಿದ್ದರೆ ನೀವು ನಕಲಿ' ಎಂದು ರಾವುತ್ ಹೇಳಿದರು.

ಮೊನ್ನೆ ಶನಿವಾರ ಔರಂಗಾಬಾದ್‌ನ ಡಾ ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದ್ಲಿ ಮಾತನಾಡಿದ್ದ ಮಹಾರಾಷ್ಟ್ರದ ರಾಜ್ಯಪಾಲರು, ಶಿವಾಜಿ ಮಹಾರಾಜರು 'ಹಳೆಯ ವಿಗ್ರಹ' ಆಗಿದ್ದಾರೆ ಮತ್ತು ಹೊಸದನ್ನು ಬಾಬಾಸಾಹೇಬ್ ಅಂಬೇಡ್ಕರ್‌ರಿಂದ ನಿತಿನ್ ಗಡ್ಕರಿಯವರಲ್ಲಿ ಕಾಣಬಹುದು ಎಂದು ಟೀಕಿಸಿದ್ದರು.

ನಿಮ್ಮ ಐಕಾನ್ ಯಾರೆಂದು ಯಾರಾದರೂ ಕೇಳಿದರೆ, ನೀವು ಯಾವುದೆಂದು ಹುಡುಕಲು ಹೋಗಬೇಕಿಲ್ಲ. ಅಂತವರು ಮಹಾರಾಷ್ಟ್ರದಲ್ಲಿಯೇ ಇದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರದ್ದು ಈಗ ಹಳೆಯ ಮಾತು. ಹೀಗಾಗಿ, ನೀವು ಬಾಬಾಸಾಹೇಬ್ ಅಂಬೇಡ್ಕರ್ ರಿಂದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ವರೆಗೆ ಹೊಸ ಐಕಾನ್‌ಗಳು ಇಲ್ಲಿಯೇ ಇದ್ದಾರೆ' ಎಂದು ಹೇಳಿದ್ದರು.

ಉದ್ಧವ್ ಠಾಕ್ರೆ ಬಣದ ಶಿವಸೇನೆಯ ವಕ್ತಾರರು ರಾಜ್ಯಪಾಲರ ಈ ಹೇಳಿಕೆಯನ್ನು ಖಂಡಿಸಿದರು, ರಾಜ್ಯಪಾಲರು ಮಹಾನ್ ನಾಯಕರಿಗೆ ಅವಮಾನ ಮಾಡುತ್ತಿದ್ದಾರೆ. ಶಿವಾಜಿ ಮಹಾರಾಜರು ನಮ್ಮ ಆರಾಧ್ಯ ದೈವ ಮಾತ್ರವಲ್ಲ, ನಮ್ಮ ಸ್ಫೂರ್ತಿಯ ಮೂಲ. ಅವರು ಯಾವಾಗಲೂ ನಮ್ಮೆಲ್ಲರ ಆರಾಧ್ಯ ದೈವವಾಗಿರುತ್ತಾರೆ ಎಂದು ಆನಂದ್ ದುಬೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ರಾಜ್ಯಪಾಲರ ಹೇಳಿಕೆಗಳ ಪ್ರಕಾರ, ಶ್ರೀರಾಮ ಮತ್ತು ಶ್ರೀಕೃಷ್ಣ ಕೂಡ ಹಳೆಯ ಐಕಾನ್‌ಗಳಾಗಿ ಮಾರ್ಪಟ್ಟಿದ್ದಾರೆ ಎಂದಿದ್ದರು. ನಾವು ಈಗ ಪೂಜಿಸಲು ಹೊಸ ದೇವತೆಗಳನ್ನು ಹುಡುಕಬೇಕೇ?' ಎಂದು ರಾಜ್ಯಪಾಲರ ಹೇಳಿಕೆಯನ್ನು ಬಲವಾಗಿ ಖಂಡಿಸಬೇಕು ಎಂದು ದುಬೆ ಕೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com