ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ, ಸಮಿತಿ ನಿಗದಿ ಪಡಿಸಿದ ಮಾನದಂಡಗಳನ್ನು ಪ್ರತಿಯೊಬ್ಬರು ಪಾಲಿಸಬೇಕು: ತರೂರ್ ಗೆ ಕಾಂಗ್ರೆಸ್ ವಾರ್ನಿಂಗ್!

ಪಕ್ಷಕ್ಕಿಂತ ಯಾರೊಬ್ಬರು ದೊಡ್ಡವರಲ್ಲ, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ನಿಗದಿ ಪಡಿಸಿರುವ ಮಾನದಂಡಗಳನ್ನು ಕಾಂಗ್ರೆಸ್ ಸಂಸದರೂ ಅನುಸರಿಸಬೇಕು ಎಂದು ಶಶಿ  ತರೂರ್ ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್ ಎಚ್ಚರಿಕೆ ನೀಡಿದ್ದಾರೆ.
ಶಶಿ ತರೂರ್
ಶಶಿ ತರೂರ್

ನವದೆಹಲಿ: ಪಕ್ಷಕ್ಕಿಂತ ಯಾರೊಬ್ಬರು ದೊಡ್ಡವರಲ್ಲ, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ನಿಗದಿ ಪಡಿಸಿರುವ ಮಾನದಂಡಗಳನ್ನು ಕಾಂಗ್ರೆಸ್ ಸಂಸದರೂ ಅನುಸರಿಸಬೇಕು ಎಂದು ಶಶಿ  ತರೂರ್ ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್ ಎಚ್ಚರಿಕೆ ನೀಡಿದ್ದಾರೆ.

"ಕೆಪಿಸಿಸಿ ಮುಖ್ಯಸ್ಥರು ಮತ್ತು ವಿರೋಧ ಪಕ್ಷದ ನಾಯಕರು ಈಗಾಗಲೇ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ನಾನು ಅವರನ್ನು ಬೆಂಬಲಿಸುತ್ತೇನೆ. ತರೂರ್ ಮಾತ್ರವಲ್ಲದೆ, ಎಲ್ಲ ಕಾಂಗ್ರೆಸ್ ನಾಯಕರು ಕೂಡ ಸಮಿತಿ ನಿಗದಿಪಡಿಸಿದ ಮಾನದಂಡಗಳನ್ನು ಅನುಸರಿಸಬೇಕು. ಯಾರೂ ಪಕ್ಷಕ್ಕಿಂತ ಮೇಲಲ್ಲ.

ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ತರೂರ್ ವಿರುದ್ಧ ಕೆಪಿಸಿಸಿ ಯಾವುದೇ ದೂರು ದಾಖಲಿಸಿದರೆ, ನಾವು ಮಧ್ಯಪ್ರವೇಶಿಸುತ್ತೇವೆ ಎಂದು ಅನ್ವರ್ ಹೇಳಿದ್ದಾರೆ, ಈ ವಿಷಯದ ಬಗ್ಗೆ ತರೂರ್ ಅವರೊಂದಿಗೆ ತಾವು ಇನ್ನೂ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪಕ್ಷವು ಯಾವುದೇ 'ಬಣ ರಾಜಕೀಯ'ವನ್ನು ಸಹಿಸುವುದಿಲ್ಲ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಿದೆ ಎಂದು ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ. ತರೂರ್ ಪ್ರವಾಸದ ಕುರಿತು ಯಾವುದೇ ಹೇಳಿಕೆ ನೀಡದಂತೆ ಕಾಂಗ್ರೆಸ್ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಸೂಚಿಸಿದ್ದಾರೆ.

ಮೂರು ಬಾರಿ ಸಂಸದರಾಗಿರುವ ಅವರು ರಾಜ್ಯದಲ್ಲಿ ತಮ್ಮ ರಾಜಕೀಯ ಪ್ರಭಾವವನ್ನು ವಿಸ್ತರಿಸುವ ಸ್ಪಷ್ಟ ಪ್ರಯತ್ನದಲ್ಲಿದ್ದಾರೆ. ಹೀಗಾಗಿ ತಮ್ಮ ಉತ್ತರ ಕೇರಳ ಪ್ರವಾಸವನ್ನು ಪ್ರಾರಂಭಿಸಿದ ನಂತರ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮಲಬಾರ್‌ ಪ್ರವಾಸವನ್ನು ಮುಂದುವರಿಸಿರುವ ಅವರು ಸಾದಿಕ್‌ ಅಲಿ ಶಿಹಾಬ್‌ ತಂಙಲ್‌ ಅವರ ಪಾಣಕ್ಕಾಡ್‌ನ ನಿವಾಸದಲ್ಲಿ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ನ (ಐಯುಎಂಎಲ್‌) ಹಿರಿಯ ನಾಯಕರನ್ನು ಭೇಟಿಯಾಗಿದ್ದಾರೆ. IUML ನಾಯಕರೊಂದಿಗಿನ ತರೂರ್ ಭೇಟಿಯ ಕುರಿತು ಪ್ರತಿಕ್ರಿಯಿಸಿದ ಅನ್ವರ್, “ತರೂರ್ ಮುಸ್ಲಿಂ ಲೀಗ್ ನಾಯಕರನ್ನು ಅಥವಾ ಯಾರನ್ನಾದರೂ ವೈಯಕ್ತಿಕವಾಗಿ ಭೇಟಿ ಮಾಡಲು ಸ್ವತಂತ್ರ್ಯರಾಗಿದ್ದಾರೆ. ಆದರೆ, ಅವರು ಪಕ್ಷದ ಮಾರ್ಗ ಸೂಚಿಗಳನ್ನು ಅನುಸರಿಸಬೇಕು. ಇದು ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ಅನ್ವಯಿಸುತ್ತದೆ'' ಎಂದರು.

ಪಕ್ಷದಲ್ಲಿ ‘ತರೂರ್ ಬಣ’ ತಲೆ ಎತ್ತುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಈ ವಿಚಾರದಲ್ಲಿ ಭಾಗಿಯಾಗುವ ಉದ್ದೇಶ ನನಗಿಲ್ಲ, ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಪಿಸಿಸಿಗೆ ಅಧಿಕಾರವಿದೆ ಎಂದು ತಿಳಿಸಿದ್ದಾರೆ. ಕೋಝಿಕ್ಕೋಡ್‌ನಲ್ಲಿ ಯೂತ್ ಕಾಂಗ್ರೆಸ್ ತನ್ನ ಕಾರ್ಯಕ್ರಮವನ್ನು ರದ್ದುಗೊಳಿಸಿದ ಬಗ್ಗೆ ತನಿಖೆ ನಡೆಸಬೇಕೆಂದು ತರೂರ್ ಒತ್ತಾಯಿಸಿದ್ದಾರೆ, ಕೆಪಿಸಿಸಿ ಈ ಬಗ್ಗೆ ಸಮಾಲೋಚನೆ ಮಾಡಲಿದೆ ಎಂದು ಅನ್ವರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com