ದೆಹಲಿ ಅಬಕಾರಿ ಹಗರಣ: 7 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಸಿಬಿಐ, ಸಿಸೋಡಿಯಾ ಹೆಸರಿಲ್ಲ
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತ ಇಬ್ಬರು ಉದ್ಯಮಿಗಳು ಸೇರಿದಂತೆ ಏಳು ಆರೋಪಿಗಳ ವಿರುದ್ಧ ಸಿಬಿಐ ಶುಕ್ರವಾರ ತನ್ನ ಮೊದಲ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published: 25th November 2022 05:46 PM | Last Updated: 25th November 2022 05:46 PM | A+A A-

ಮನೀಶ್ ಸಿಸೋಡಿಯಾ
ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತ ಇಬ್ಬರು ಉದ್ಯಮಿಗಳು ಸೇರಿದಂತೆ ಏಳು ಆರೋಪಿಗಳ ವಿರುದ್ಧ ಸಿಬಿಐ ಶುಕ್ರವಾರ ತನ್ನ ಮೊದಲ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಬಂಧಿತ ಉದ್ಯಮಿಗಳಲ್ಲದೆ, ಸುದ್ದಿ ವಾಹಿನಿಯೊಂದರ ಮುಖ್ಯಸ್ಥರು, ಹೈದರಾಬಾದ್ ಮೂಲದ ಮದ್ಯ ಉದ್ಯಮಿ, ದೆಹಲಿ ಮೂಲದ ಮದ್ಯ ವಿತರಕರು ಮತ್ತು ಅಬಕಾರಿ ಇಲಾಖೆಯ ಇಬ್ಬರು ಅಧಿಕಾರಿಗಳ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಅವರು ಹೇಳಿದ್ದಾರೆ.
ಸಿಬಿಐ ಎಫ್‌ಐಆರ್‌ನಲ್ಲಿ ಹೆಸರಿಸಲಾದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಹೆಸರು ಇಂದು ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ ಇಲ್ಲ. ತನಿಖಾ ಸಂಸ್ಥೆಯು ತನಿಖೆ ಕೈಗೆತ್ತಿಕೊಂಡ 60 ದಿನಗಳಲ್ಲಿ ಸಲ್ಲಿಸಿದ ಮೊದಲ ಚಾರ್ಜ್‌ಶೀಟ್ ಇದಾಗಿದೆ.
ಇದನ್ನು ಓದಿ: ದೆಹಲಿ ಅಬಕಾರಿ ನೀತಿ ಹಗರಣ: ತನಿಖಾ ಸಂಸ್ಥೆಗಳು ನೀಡಿರುವ ಮಾಧ್ಯಮ ಪ್ರಕಟಣೆಗಳನ್ನು ಕೇಳಿದ ಹೈಕೋರ್ಟ್
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 120-ಬಿ(ಕ್ರಿಮಿನಲ್ ಪಿತೂರಿ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಆರೋಪ ಹೊರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ತನಿಖಾ ಸಂಸ್ಥೆಯು ಸಿಸೋಡಿಯಾ ಅವರ "ಆಪ್ತ ಸಹಾಯಕ" ದಿನೇಶ್ ಅರೋರಾ ಅವರನ್ನು ಪ್ರಕರಣದಲ್ಲಿ ಅಪ್ರೂವರ್(ಮಾಫಿ ಸಾಕ್ಷಿದಾರ) ಮಾಡುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.