'ಗದ್ದರ್' ಎಂದ ಅಶೋಕ್ ಗೆಹ್ಲೋಟ್ ಗೆ ಸಚಿನ್ ಪೈಲಟ್ ತಿರುಗೇಟು!
ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಣ ಶೀತಲ ಸಮರ ಮುಂದುವರೆದಿದೆ. ಅಶೋಕ್ ಗೆಹ್ಲೋಟ್ ಅವರ 'ದೇಶದ್ರೋಹಿ' ಹೇಳಿಕೆಗೆ ಸಚಿನ್ ಪೈಲಟ್ ತಿರುಗೇಟು ನೀಡಿದ್ದಾರೆ.
Published: 25th November 2022 12:00 AM | Last Updated: 25th November 2022 03:31 PM | A+A A-

ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್
ಜೈಪುರ: ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಣ ಶೀತಲ ಸಮರ ಮುಂದುವರೆದಿದೆ. ಅಶೋಕ್ ಗೆಹ್ಲೋಟ್ ಅವರ 'ದೇಶದ್ರೋಹಿ' ಹೇಳಿಕೆಗೆ ಸಚಿನ್ ಪೈಲಟ್ ತಿರುಗೇಟು ನೀಡಿದ್ದಾರೆ.
ಇಂತಹ ಭಾಷೆ ಬಳಸುವುದು ಅವರಂತಹ ಅನುಭವಿ ವ್ಯಕ್ತಿಗೆ ಯೋಗ್ಯವಲ್ಲ ಮತ್ತು ಬಿಜೆಪಿ ಸೋಲಿಸಲು ಒಗ್ಗಟ್ಟಿನಿಂದ ಹೋರಾಡಲು ಆದ್ಯತೆ ನೀಡುವುದರೊಂದಿಗೆ ರಾಹುಲ್ ಗಾಂಧಿಯವರ ಕೈಯನ್ನು ಬಲಪಡಿಸಬೇಕು ಎಂದು ಹೇಳಿದ್ದಾರೆ. ಗೆಹ್ಲೋಟ್ ನನ್ನನ್ನು 'ನಿಕಮ್ಮ, ನಾಯಕ, ಗದ್ದರ್ ಮತ್ತಿತರ ಹೆಸರುಗಳಿಂದ ಕರೆಯುತ್ತಿದ್ದಾರೆ ಆದರೆ ಅಂತಹ ಭಾಷೆ ಬಳಸುವುದು ಅವರಿಗೆ ಶೋಭೆ ತರುವಂತಹದ್ದಲ್ಲ ಎಂದರು.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ರಾಜಸ್ಥಾನ ಪ್ರವೇಶಿಸಲು ಕೆಲ ದಿನಗಳು ಇರುವಂತೆಯೇ ಪೈಲಟ್ ಅವರನ್ನು ಗದ್ದರ್ (ದೇಶದ್ರೋಹಿ) ಎಂದು ಕರೆಯುವ ಮೂಲಕ ಗೆಹ್ಲೋಟ್ ಕಟುವಾದ ವಾಗ್ದಾಳಿ ನಡೆಸಿದ್ದು, ಅವರು ಎಂದಿಗೂ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಸಚಿನ್ ಪೈಲಟ್ ಒಬ್ಬ ಗದ್ದರ್, ಸಿಎಂ ಆಗಲು ಸಾಧ್ಯವಿಲ್ಲ: ಅಶೋಕ್ ಗೆಹ್ಲೋಟ್
ಈ ಟೀಕೆಗಳಿಗೆ ಪ್ರತಿಕ್ರಿಯಿಸಿದ ಪೈಲಟ್, ಅಶೋಕ್ ಗೆಹ್ಲೋಟ್ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಅನುಭವಿ, ಹಿರಿಯರು ಮತ್ತು ಪಕ್ಷದಲ್ಲಿ ಉನ್ನತ ಸ್ಥಾನಮಾನ ಹೊಂದಿರುವ ಅಶೋಕ್ ಗೆಹ್ಲೋಟ್, ಇಂತಹ ಭಾಷೆ ಬಳಸುವುದು, ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಆರೋಪ ಮಾಡುವುದು ಯೋಗ್ಯವಲ್ಲ ಎಂದರು. ನಾವು ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕಾದಾಗ ಇಂತಹ ಹೇಳಿಕೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅವರು ಹೇಳಿದರು.