ಭಾರತ್ ಜೋಡೋ ಯಾತ್ರೆ ಎಫೆಕ್ಟ್: ಈಗ ಹೆಚ್ಚು ತಾಳ್ಮೆ ಬಂದಿದೆ ಎಂದ ರಾಹುಲ್ ಗಾಂಧಿ
ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಿಂದ ಹೆಚ್ಚಿನ ತಾಳ್ಮೆ ಮತ್ತು ಇತರರ ಮಾತನ್ನು ಕೇಳುವ ಸಾಮರ್ಥ್ಯ ಸೇರಿದಂತೆ ತನ್ನಲ್ಲಿ ಕೆಲವು ಬದಲಾವಣೆಗಳಾಗಿವೆ ಎಂದು ಯಾತ್ರೆಯ ನೇತೃತ್ವ ವಹಿಸಿರುವ...
Published: 29th November 2022 03:45 PM | Last Updated: 29th November 2022 07:19 PM | A+A A-

ರಾಹುಲ್ ಗಾಂಧಿ
ಇಂದೋರ್: ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಿಂದ ಹೆಚ್ಚಿನ ತಾಳ್ಮೆ ಮತ್ತು ಇತರರ ಮಾತನ್ನು ಕೇಳುವ ಸಾಮರ್ಥ್ಯ ಸೇರಿದಂತೆ ತನ್ನಲ್ಲಿ ಕೆಲವು ಬದಲಾವಣೆಗಳಾಗಿವೆ ಎಂದು ಯಾತ್ರೆಯ ನೇತೃತ್ವ ವಹಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಹೇಳಿದ್ದಾರೆ.
ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಈಗ ಮಧ್ಯ ಪ್ರದೇಶ ಪ್ರವೇಶಿಸಿದ್ದು, ಕಾಂಗ್ರೆಸ್ ನ ಮಹತ್ವಾಕಾಂಕ್ಷೆಯ ಈ ಯಾತ್ರೆ ಈಗ 2,000 ಕಿ.ಮೀ ಗಿಂತಲೂ ಹೆಚ್ಚು ದೂರ ಕ್ರಮಿಸಿದೆ.
ಇಂದೋರ್ ನಲ್ಲಿ ಯಾತ್ರೆಯ ಸಮಯದಲ್ಲಿ ತಮ್ಮ ಅತ್ಯಂತ ತೃಪ್ತಿಕರ ಕ್ಷಣದ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, "ಹಲವು ಕ್ಷಣಗಳು ಇವೆ, ಆದರೆ ಯಾತ್ರೆಯಿಂದಾಗಿ ನನ್ನ ತಾಳ್ಮೆ ಹೆಚ್ಚಿದೆ ಎಂಬುದೂ ಸೇರಿದಂತೆ ಹಲವು ಬದಲಾವಣೆಗಳಾಗಿವೆ" ಎಂದರು.
ಇದನ್ನು ಓದಿ: ಭಾರತ್ ಜೋಡೋ ಯಾತ್ರಾ ರಾಜಕೀಯ: ಬದ್ಧತೆ ಇಲ್ಲದ ಪಾರ್ಟ್ ಟೈಮ್ ರಾಜಕಾರಣಿ 'ಪಪ್ಪು'; ಬದಲಾಗಲಿದೆ 'ರಾಗಾ' ಇಮೇಜ್!
"ಎರಡನೆಯದಾಗಿ, ಈಗ ಯಾರಾದರೂ ನನ್ನನ್ನು ತಳ್ಳಿದರೆ ಅಥವಾ ಎಳೆದಾಡಿದರೆ ನಾನು ಈಗ ಕಿರಿಕಿರಿ ಅಂತ ಭಾವಿಸುವುದಿಲ್ಲ. ಅದು ನನ್ನ ಮೇಲೆ ಈಗ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಈ ಮೊದಲು ತಳ್ಳಾಟ, ನೂಕಾಟದಿಂದ ನನಗೆ ಬಹಳ ಕಿರಿಕಿರಿಯಾಗುತ್ತಿತ್ತು" ಎಂದು ಅವರು ಹೇಳಿದ್ದಾರೆ.
ಮೂರನೆಯದಾಗಿ, ಇತರರ ಸಮಸ್ಯೆಗಳನ್ನು ಕೇಳುವ ಸಾಮರ್ಥ್ಯವೂ ಈಗ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ತಿಳಿಸಿದ್ದಾರೆ.
"ಯಾರಾದರೂ ನನ್ನ ಬಳಿಗೆ ಬಂದರೆ, ನಾನು ಅವರ ಮಾತನ್ನು ಹೆಚ್ಚು ಕೇಳುತ್ತೇನೆ. ಇವೆಲ್ಲವೂ ನನಗೆ ಸಾಕಷ್ಟು ಪ್ರಯೋಜನಕಾರಿ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದ್ದಾರೆ.