ಒಬ್ಬ ಅಭ್ಯರ್ಥಿ ಸ್ಪರ್ಧಿಸಲು ನಿರ್ಧರಿಸಿದಾಗ ನಾ ಹೇಗೆ ತಡೆಯಲಿ?: ತರೂರ್ ಸ್ಪರ್ಧೆ ಬಗ್ಗೆ  ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಉತ್ತಮ ಎಂದು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶಶಿ ತರೂರ್‌ ಸೇರಿದಂತೆ ಇತರರಿಗೆ ಹೇಳಿದ್ದಾಗಿ ಕಣದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ...
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಉತ್ತಮ ಎಂದು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶಶಿ ತರೂರ್‌ ಸೇರಿದಂತೆ ಇತರರಿಗೆ ಹೇಳಿದ್ದಾಗಿ ಕಣದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ತಿಳಿಸಿದ್ದಾರೆ. 

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ನಂತರ ಇಂದು ದೆಹಲಿಯಲ್ಲಿ ಮೊದಲ ಬಾರಿಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಪಕ್ಷದ ಹಿರಿಯ ಮುಖಂಡರ ಒತ್ತಾಯದ ಮೇರೆಗೆ ಅಧ್ಯಕ್ಷ ಸ್ಥಾನಕ್ಕಾಗಿ ಹೋರಾಟ ನಡೆಸಲು ನಿರ್ಧರಿಸಿರುವುದಾಗಿಯೂ ತಿಳಿಸಿದರು.

ನಾಮಪತ್ರ ಸಲ್ಲಿಕೆ ಬಳಿಕ ತರೂರ್‌ಗೆ ದೂರವಾಣಿ ಕರೆ ಮಾಡಿದ ಕುರಿತು ಮಾತನಾಡಿದ ಖರ್ಗೆ, ಒಮ್ಮತದ ಅಭ್ಯರ್ಥಿ ಇರುವುದು ಉತ್ತಮ ಎಂದು ಹೇಳಿದೆ. ಆದರೆ ಅವರು ‘ಪ್ರಜಾಪ್ರಭುತ್ವದಲ್ಲಿ ಹೋರಾಟ ನಡೆಯಬೇಕು ಎಂದರು. ಅದಕ್ಕೆ ನಾನು ಸರಿ ಎಂದು ಹೇಳಿದೆ’ ಎಂದು ತಿಳಿಸಿದರು.

ಅಭ್ಯರ್ಥಿಯೊಬ್ಬರು ಸ್ಪರ್ಧಿಸಲು ನಿರ್ಧರಿಸಿದಾಗ ನಾನು ಅವರನ್ನು ಹೇಗೆ ತಡೆಯಲಿ. ಹಾಗಾಗಿ ಅವರು ಹೋರಾಟ ನಡೆಸಲಿ. ಅವರು ಸಹ ನನ್ನ ಕಿರಿಯ ಸಹೋದರ, ಇದು ಕುಟುಂಬದ ವಿಷಯವಾಗಿದ್ದು, ಇಂದು ಮತ್ತು ನಾಳೆ ನಾವು ಒಗ್ಗಟ್ಟಾಗಿರಬೇಕು ಎಂದು ಖರ್ಗೆ ಪ್ರತಿಪಾದಿಸಿದರು.

ಚುನಾವಣೆಗೆ ಸ್ಪರ್ಧಿಸುವ ನಿರ್ಧಾರದ ಹಿಂದಿನ ಕಾರಣವನ್ನು ವಿವರಿಸಿದ ಅವರು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸದ ಕಾರಣ, ನನ್ನ ಹಿರಿಯ ಸಹೋದ್ಯೋಗಿಗಳು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನನ್ನನ್ನು ಕೇಳಿದರು. ನಾನು ಯಾರ ವಿರುದ್ಧವೂ ಹೋರಾಡುತ್ತಿಲ್ಲ. ನಾನು ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕಾಗಿ ಹೋರಾಡುತ್ತಿದ್ದೇನೆ ಎಂದರು.

ನಾನು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ನನ್ನ ಚುನಾವಣಾ ಪ್ರಚಾರವನ್ನು ಪ್ರಾರಂಭಿಸುತ್ತಿದ್ದೇನೆ. ನಾನು ಯಾವಾಗಲೂ ನನ್ನ ಸಿದ್ಧಾಂತ ಮತ್ತು ನೀತಿಗಳಿಗಾಗಿ ಹೋರಾಡುತ್ತೇನೆ. ನಾನು ಹಲವಾರು ಬಾರಿ ವಿರೋಧ ಪಕ್ಷದ ನಾಯಕ, ಮಂತ್ರಿ ಮತ್ತು ಶಾಸಕನಾಗಿದ್ದೇನೆ. ನಾನು ಈಗ ಮತ್ತೆ ಹೋರಾಡಲು ಬಯಸುತ್ತೇನೆ ಮತ್ತು ಅದೇ ನೈತಿಕತೆ ಮತ್ತು ಸಿದ್ಧಾಂತವನ್ನು ಮುಂದಕ್ಕೆ ತೆಗೆದುಕೊಂಡು ಹೊಗಲು ಬಯಸುತ್ತೇನೆ ಎಂದರು.

ತಮ್ಮ ಉಮೇದುವಾರಿಕೆಯನ್ನು ಮತ್ತಷ್ಟು ವಿವರಿಸಿದ ಖರ್ಗೆ, ನಾನು ಕೇವಲ ದಲಿತ ನಾಯಕನಾಗಿ ಸ್ಪರ್ಧಿಸುತ್ತಿಲ್ಲ. ನಾನು ಕಾಂಗ್ರೆಸ್ ನಾಯಕನಾಗಿ ಸ್ಪರ್ಧಿಸುತ್ತಿದ್ದೇನೆ ಮತ್ತು ಅದನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.

ಅಕ್ಟೋಬರ್ 17 ರಂದು ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com